×
Ad

ವಸತಿ ಶಾಲೆಯಲ್ಲಿ 21 ಮಕ್ಕಳಿಗೆ ಲೈಂಗಿಕ ಕಿರುಕುಳ | ದೋಷಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ

Update: 2024-09-28 21:27 IST

PC : NDTV 

ಇಟಾನಗರ್(ಅರುಣಾಚಲಪ್ರದೇಶ): ಇಲ್ಲಿನ ವಸತಿ ಶಾಲೆಯಲ್ಲಿ 15 ಬಾಲಕಿಯರು ಸೇರಿದಂತೆ 21 ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ದೋಷಿ ಯುಮ್ಕೆನ್ ಬಗ್ರಾಗೆ ಯುಪಿಯಾದ ವಿಶೇಷ ಪೊಕ್ಸೊ ನ್ಯಾಯಾಲಯ ಗುರುವಾರ ಮರಣದಂಡನೆ ವಿಧಿಸಿದೆ.

ಯುಪಿಯಾದ ಪಶ್ಚಿಮ ಸೆಷನ್ಸ್ ವಿಭಾಗದ ವಿಶೇಷ ನ್ಯಾಯಾಧೀಶರ ನ್ಯಾಯಾಲಯ (ಪೊಕ್ಸೊ)ಪ್ರಕರಣದ ಇತರ ಇಬ್ಬರು ದೋಷಿಗಳಾದ ಮರ್ಬೋಮ್ ನ್ಗೋಮ್‌ದಿರ್ ಹಾಗೂ ಸಿಂಗ್ಟನ್ ಯೋರ್ಪೆನ್‌ಗೆ ತಲಾ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ನೀಡಿದೆ.

ಶಿ-ಯೋಮಿ ಜಿಲ್ಲೆಯ ಕರೋ ಸರಕಾರಿ ವಸತಿ ಶಾಲೆಯಲ್ಲಿ 2019 ಹಾಗೂ 2022ರ ನಡುವೆ 6 ಹಾಗೂ 15 ವರ್ಷಗಳ ನಡುವಿನ ಪ್ರಾಯದ 15 ಬಾಲಕಿಯರು ಸೇರಿದಂತೆ 21 ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಲಾಗಿತ್ತು. ವಾರ್ಡನ್ ಆಗಿದ್ದ ಯುಮ್ಕೆನ್ ಬಗ್ರಾ, ಹಿಂದಿ ಅಧ್ಯಾಪಕನಾಗಿದ್ದ ಮರ್ಬೋಮ್ ನ್ಗೋಮ್‌ದಿರ್, ಶಾಲೆಯ ಮಾಜಿ ಮುಖ್ಯೋಪಾಧ್ಯಾಯನಾಗಿದ್ದ ಸಿಂಗ್ಟನ್ ಯೋರ್ಪೆನ್ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಪೊಲೀಸ್ ಅಧೀಕ್ಷಕ ರೋಹಿತ್ ರಾಜ್‌ಬೀರ್ ಸಿಂಗ್ ತಿಳಿಸಿದ್ದಾರೆ.

ಕಳೆದ ವರ್ಷ ನವೆಂಬರ್ 2ರಂದು ಇಬ್ಬರು ಸಹೋದರಿಯರು ತಮ್ಮ ಪೋಷಕರಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ದೂರಿದ ಬಳಿಕ ವಸತಿ ಶಾಲೆಯಲ್ಲಿ ನಡೆದ ಈ ಲೈಂಗಿಕ ಕಿರುಕುಳ ಬೆಳಕಿಗೆ ಬಂದಿತ್ತು. ಅನಂತರ ಎರಡು ದಿನಗಳ ಬಳಿಕ ಜಿಲ್ಲೆಯ ಮೊನಿಗಾಂಗ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.

ಎಫ್‌ಐಆರ್ ದಾಖಲಾಗುತ್ತಿದ್ದಂತೆ ಬಗ್ರಾ ತಲೆ ಮರೆಸಿಕೊಂಡಿದ್ದ. ಆತನನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಪೊಲೀಸರು ಬಂಧಿಸಿದ್ದರು.

ಗುಹಾವಟಿ ಉಚ್ಚ ನ್ಯಾಯಾಲಯದ ಇಟಾನಗರ ಪೀಠ ಈ ವರ್ಷ ಜುಲೈ 21ರಂದು ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿತು ಹಾಗೂ ಬಗ್ರಾನಿಗೆ ನೀಡಿದ್ದ ಜಾಮೀನನನ್ನು ರದ್ದುಗೊಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News