ಸುಪ್ರಿಂ ಕೋರ್ಟ್ ನಲ್ಲಿ ನಾಳೆ ಶರದ್ ಪವಾರ್ ನೇತೃತ್ವದ ಎನ್ ಸಿ ಪಿ ಬಣದ ಅರ್ಜಿಯ ವಿಚಾರಣೆ
ಶರದ್ ಪವಾರ್ | Photo: PTI
ಹೊಸದಿಲ್ಲಿ: ಅಜಿತ್ ಪವಾರ್ ನೇತೃತ್ವದ ಬಣಕ್ಕೆ ನಿಜವಾದ ಎನ್ ಸಿ ಪಿ ಎಂದು ಮಾನ್ಯತೆ ನೀಡಿರುವ ಚುನಾವಣಾ ಆಯೋಗದ ಆದೇಶವನ್ನು ಪ್ರಶ್ನಿಸಿ ಶರದ್ ಪವಾರ್ ಅವರು ಸಲ್ಲಿಸಿರುವ ಅರ್ಜಿಯನ್ನು ಸರ್ವೋಚ್ಛ ನ್ಯಾಯಾಲಯವು ಸೋಮವಾರ ಕೈಗೆತ್ತಿಕೊಳ್ಳಲಿದೆ.
ನ್ಯಾಯಮೂರ್ತಿ ಸೂರ್ಯಕಾಂತ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು ಅರ್ಜಿಯ ವಿಚಾರಣೆಯನ್ನು ನಡೆಸಲಿದೆ.
ಚುನಾವಣಾ ಆಯೋಗದ ಆದೇಶದ ವಿರುದ್ಧ ಫೆ.12ರಂದು ಸಲ್ಲಿಸಿದ್ದ ಅರ್ಜಿಯಲ್ಲಿ ಪವಾರ್ ನೇತೃತ್ವದ ಬಣವು ಪಕ್ಷದ ಗಡಿಯಾರ ಚಿಹ್ನೆಯನ್ನು ಅಜಿತ್ ಪವಾರ್ ಬಣಕ್ಕೆ ಹಸ್ತಾಂತರಿಸುವ ಅದರ ನಿರ್ಧಾರದ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದೆ.
ಶುಕ್ರವಾರ ಪವಾರ್ ಬಣದ ಪರ ವಕೀಲ ಅಭಿಷೇಕ್ ಸಿಂಘ್ವಿಯವರು ಸರ್ವೋಚ್ಛ ನ್ಯಾಯಾಲಯದಲ್ಲಿ ಅರ್ಜಿಯ ತುರ್ತು ವಿಚಾರಣೆಗೆ ಕೋರಿದ್ದರು. ‘ಫೆ.20ರಂದು ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶನ ಆರಂಭಗೊಳ್ಳಲಿದೆ ಮತ್ತು ಚುನಾವಣಾ ಆಯೋಗದ ಆದೇಶದಿಂದಾಗಿ ಅಜಿತ್ ಪವಾರ್ ಬಣವು ಹೊರಡಿಸಬಹುದಾದ ಸಚೇತಕಾಜ್ಞೆಯನ್ನು ಶರದ್ ಪವಾರ್ ಬಣವು ಪಾಲಿಸಬೇಕಾಗುತ್ತದೆ. ನಮಗೆ ಪರ್ಯಾಯ ಚಿಹ್ನೆಯನ್ನೂ ನೀಡಲಾಗಿಲ್ಲ, ಹೀಗಾಗಿ ನಮ್ಮ ಪರಿಸ್ಥಿತಿಯು ಶಿವಸೇನೆಯ ಉದ್ಧವ್ಠಾಕ್ರೆ ಬಣಕ್ಕಿಂತಲೂ ಕೆಟ್ಟದಾಗಿದೆ’ ಎಂದು ಸಿಂಘ್ವಿ ತಿಳಿಸಿದ್ದರು.
ಈಗಾಗಲೇ ಫೆ.7ರಂದು ಸರ್ವೋಚ್ಛ ನ್ಯಾಯಾಲಯದಲ್ಲಿ ಕೇವಿಯಟ್ ಸಲ್ಲಿಸಿರುವ ಅಜಿತ್ ಪವಾರ್ ನೇತೃತ್ವದ ಬಣವು, ಶರದ್ ಪವಾರ್ ಬಣವು ಸಲ್ಲಿಸಬಹುದಾದ ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಆದೇಶವನ್ನು ತನ್ನ ವಾದವನ್ನು ಆಲಿಸದೆ ಹೊರಡಿಸಬಾರದು ಎಂದು ಕೇಳಿಕೊಂಡಿದೆ.