ʼಶರಬತ್ ಜಿಹಾದ್ʼ ಹೇಳಿಕೆ: ʼಹಮ್‌ದರ್ದ್ʼ ವಿರುದ್ಧ ಯಾವುದೇ ಅವಹೇಳನಕಾರಿ ಹೇಳಿಕೆ ನೀಡುವುದಿಲ್ಲ ಎಂದು ಹೈಕೋರ್ಟ್‌ಗೆ ರಾಮ್‌ದೇವ್ ಭರವಸೆ
ಯೋಗಗುರು ರಾಮದೇವ್ | PTI
ಹೊಸದಿಲ್ಲಿ: ʼಹಮ್‌ದರ್ದ್ʼನ ರೂಹ್ ಅಫ್ಝಾ ವಿರುದ್ಧ ತನ್ನ ‘ಶರ್ಬತ್ ಜಿಹಾದ್’ ಹೇಳಿಕೆಯಂತಹ ಯಾವುದೇ ಅವಹೇಳನಕಾರಿ ಹೇಳಿಕೆಯನ್ನು ನೀಡುವುದಿಲ್ಲ ಅಥವಾ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸುವುದಿಲ್ಲ ಎಂದು ಯೋಗಗುರು ರಾಮದೇವ್ ಅವರು ಶುಕ್ರವಾರ ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಪ್ರಮಾಣಪತ್ರವನ್ನು ಸಲ್ಲಿಸಿದ್ದಾರೆ.
ವಿವಾದಾತ್ಮಕ ಆನ್‌ಲೈನ್ ವಿಷಯವನ್ನು ಅಳಿಸುವಂತೆ ಮೇ 1ರಂದು ಆದೇಶಿಸಿದ್ದ ನ್ಯಾ.ಅಮಿತ್ ಬನ್ಸಾಲ್ ಅವರು,ಶುಕ್ರವಾರ ವಿಚಾರಣೆ ಸಂದರ್ಭದಲ್ಲಿ ಅಫಿಡವಿಟ್ ಸಲ್ಲಿಸುವಂತೆ ರಾಮದೇವ ಪರ ವಕೀಲರಿಗೆ ಸೂಚಿಸಿದರು.
ರಾಮದೇವ ಅವರ ಪತಂಜಲಿ ಫುಡ್ಸ್ ಕೂಡ ಇಂತಹುದೇ ಮುಚ್ಚಳಿಕೆಯನ್ನು ಸಲ್ಲಿಸಿತು.
ವಿವಾದಾತ್ಮಕ ಹೇಳಿಕೆಗಳ ಕುರಿತು ಹಮ್‌ದರ್ದ್ ನ್ಯಾಷನಲ್ ಫೌಂಡೇಷನ್ ಇಂಡಿಯಾ ರಾಮದೇವ ಮತ್ತು ಅವರ ಪತಂಜಲಿ ಫುಡ್ಸ್ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ದಾಖಲಿಸಿದೆ.
ಪತಂಜಲಿಯ ‘ಗುಲಾಬ ಶರ್ಬತ್’ನ ಜಾಹೀರಾತಿನಲ್ಲಿ ರಾಮದೇವ ಅವರು ಹಮದರ್ದ್‌ನ ರೂಹ್ ಅಫ್ಝಾದಿಂದ ಗಳಿಸುವ ಹಣವು ಮದರಸಗಳು ಮತ್ತು ಮಸೀದಿಗಳ ನಿರ್ಮಾಣಕ್ಕೆ ಬಳಕೆಯಾಗುತ್ತದೆ ಎಂದು ಆರೋಪಿಸಿದ್ದಾರೆ ಎಂದು ಹಮ್‌ದರ್ದ್ ಪ್ರತಿಪಾದಿಸಿದೆ.
ಹಿಂದಿನ ಆದೇಶಕ್ಕೆ ಅನುಗುಣವಾಗಿ ಆಕ್ಷೇಪಾರ್ಹ ಯೂಟ್ಯೂಬ್ ವೀಡಿಯೊವನ್ನು ತೆಗೆದುಹಾಕುವ ಬದಲು ಪ್ರತಿವಾದಿಗಳು ಅದನ್ನು ‘ಖಾಸಗಿ’ ಆಗಿ ಮಾತ್ರ ಬದಲಿಸಿದ್ದಾರೆ ಎಂದು ಹಮದರ್ದ್ ಪರ ವಕೀಲರು ಶುಕ್ರವಾರ ನ್ಯಾಯಾಲಯದ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ರಾಮದೇವ್ ಪರ ವಕೀಲರು, ‘ನ್ಯಾಯಾಲಯದ ಬಗ್ಗೆ ನಮಗೆ ಅಪಾರ ಗೌರವವಿದೆ ಮತ್ತು ಅದರ ನಿರ್ದೇಶನಗಳನ್ನು ಪಾಲಿಸಲಾಗುವುದು. ನಮ್ಮ ಬಳಿ 24 ಗಂಟೆಗಳಿವೆ, ನಾವದನ್ನು ಪಾಲಿಸುತ್ತೇವೆ ’ಎಂದು ಹೇಳಿದರು ಮತ್ತು ಮೊಕದ್ದಮೆಯನ್ನು ವಿಲೇವಾರಿ ಮಾಡುವಂತೆ ಆಗ್ರಹಿಸಿದರು. ಬಳಿಕ ನ್ಯಾಯಾಲಯವು ವಿಚಾರಣೆಯನ್ನು ಮೇ 9ಕ್ಕೆ ಮುಂದೂಡಿತು.