ಶಶಿ ತರೂರ್ ಸತತ ಮೂರನೇ ಬಾರಿ ಕಾಂಗ್ರೆಸ್ ಸಂಸದರ ಸಭೆಗೆ ಗೈರು; ಪಕ್ಷದೊಳಗೆ ಕುತೂಹಲ
ಶಶಿ ತರೂರ್ (PTI)
ಹೊಸದಿಲ್ಲಿ,ಡಿ.12: ರಾಹುಲ್ ಗಾಂಧಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಲೋಕಸಭಾ ಸಂಸದರ ಸಭೆಗೆ ತಿರುವನಂತಪುರಂ ಸಂಸದ ಶಶಿ ತರೂರ್ ಗೈರು ಹಾಜರಾಗಿದ್ದು, ಅವರ ಸತತ ಗೈರುಹಾಜರಿ ಕುರಿತು ಪಕ್ಷದೊಳಗೆ ಪ್ರಶ್ನೆಗಳು ಎದ್ದಿವೆ. ಶಶಿ ತರೂರ್ ಸಭೆಗೆ ಹಾಜರಾಗದಿರುವುದು ಇದು ಮೂರನೇ ಬಾರಿ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಶಶಿ ತರೂರ್ ಸಭೆಗೆ ಗೈರು ಹಾಜರಾಗಿರುವ ಬಗ್ಗೆ ಕಾರಣ ಸ್ಪಷ್ಟವಾಗಿಲ್ಲ ಎಂದು ಕಾಂಗ್ರೆಸ್ ಮುಖ್ಯ ಸಚೇತಕರು ತಿಳಿಸಿದ್ದಾರೆ. ಆದರೆ ತರೂರ್ ಮುಂಚಿತವಾಗಿ ತಮ್ಮ ಅನಾನುಕೂಲತೆಯ ಬಗ್ಗೆ ಮಾಹಿತಿ ನೀಡಿದ್ದರೆಂಬುದನ್ನು ಪಕ್ಷದ ಮೂಲಗಳು ದೃಢಪಡಿಸಿವೆ. ಇತ್ತೀಚಿನ ಕೆಲವು ವಾರಗಳಿಂದಲೂ ತರೂರ್ ಪ್ರಮುಖ ಪಕ್ಷದ ಚರ್ಚೆಗಳಿಂದ ದೂರ ಉಳಿಯುತ್ತಿರುವುದು ಗಮನಾರ್ಹವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಆಡಳಿತಾರೂಢ ಬಿಜೆಪಿಗೆ ಅನುಕೂಲಕರವೆಂದು ಹೇಳಲಾದ ಹೇಳಿಕೆಗಳ ನಡುವೆ ತರೂರ್ ಮತ್ತೊಮ್ಮೆ ಗೈರು ಹಾಜರಾಗಿರುವುದು ಆಕ್ಷೇಪಗಳಿಗೆ ಕಾರಣವಾಗಿದೆ. ಚಂಡೀಗಢ ಸಂಸದ ಮನೀಶ್ ತಿವಾರಿ ಕೂಡ ಈ ಸಭೆಗೆ ಹಾಜರಾಗಿರಲಿಲ್ಲ.
ತರೂರ್ ಅವರ ಸಾರ್ವಜನಿಕ ವೇಳಾಪಟ್ಟಿಯ ಪ್ರಕಾರ, ಅವರು ಗುರುವಾರ ರಾತ್ರಿ ಕೋಲ್ಕತ್ತಾದಲ್ಲಿ ಪ್ರಭಾ ಖೈತಾನ್ ಫೌಂಡೇಶನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದರಿಂದಾಗಿ ಅವರು ದಿಲ್ಲಿಗೆ ಸಮಯಕ್ಕೆ ಹಿಂತಿರುಗಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಇತ್ತೀಚೆಗಷ್ಟೇ ನ.30ರಂದು ನಡೆದ ಪಕ್ಷದ ಸಭೆಗೆ ಗೈರುಹಾಜರಾಗಿದ್ದ ವಿಚಾರಕ್ಕೆ ತರೂರ್ ಸ್ಪಷ್ಟನೆ ನೀಡಿದ್ದರು. “ನಾನು ಸಭೆಯನ್ನು ಉದ್ದೇಶಪೂರ್ವಕವಾಗಿ ತಪ್ಪಿಸಿಕೊಂಡಿಲ್ಲ; ಕೇರಳದಿಂದ ಬರುತ್ತಿದ್ದ ವಿಮಾನದಲ್ಲಿ ಇದ್ದೆ” ಎಂದು ಅವರು ಹೇಳಿದ್ದರು.
ಹಿಂದೆಯೂ ಅನಾರೋಗ್ಯ ಮತ್ತು ಪ್ರಯಾಣ ಸಂಬಂಧಿತ ಕಾರಣಗಳಿಂದ SIR ವಿಚಾರಣಾ ಚರ್ಚೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲವೆಂದು ತರೂರ್ ಕಚೇರಿ ತಿಳಿಸಿತ್ತು.
ಪಕ್ಷದ ಕೆಲ ನಾಯಕರು ತರೂರ್ ಹೆಚ್ಚುತ್ತಿರುವ ಗೈರುಹಾಜರಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭೇಟಿಯ ಸಂದರ್ಭದಲ್ಲಿ ರಾಷ್ಟ್ರಪತಿ ಭವನದ ರಾಜ್ಯ ಔತಣಕೂಟಕ್ಕೆ ಆಹ್ವಾನಿಸಲಾದ ಏಕೈಕ ಕಾಂಗ್ರೆಸ್ ಸಂಸದ ತರೂರ್ ಆಗಿದ್ದರಿಂದ ಪಕ್ಷದೊಳಗೆ ಈ ಬಗ್ಗೆ ಕುತೂಹಲ ಹೆಚ್ಚಿದೆ.