×
Ad

ಶವರ್ಮಾ ತಿಂದು ಯುವತಿ ಮೃತಪಟ್ಟ ಪ್ರಕರಣ: ಆಹಾರ ತಯಾರಿಕೆಯ ಸಮಯವನ್ನು ನಮೂದಿಸಲು ರೆಸ್ಟೋರೆಂಟ್‌ಗಳಿಗೆ ಕೇರಳ ಹೈಕೋರ್ಟ್ ಆದೇಶ

Update: 2023-11-15 12:22 IST

Photo: PTI

ತಿರುವನಂತಪುರಂ: ತಮ್ಮ ಪೊಟ್ಟಣಗಳ ಮೇಲೆ ಆಹಾರೋತ್ಪನ್ನಗಳ ತಯಾರಿಕೆಯ ದಿನಾಂಕ ಹಾಗೂ ಸಮಯವನ್ನು ಎಲ್ಲ ಉಪಾಹಾರ ಗೃಹಗಳು ನಮೂದಿಸಬೇಕು ಎಂದು ಮಂಗಳವಾರ ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ ಎಂದು indianexpress.com ವರದಿ ಮಾಡಿದೆ.

ಶವರ್ಮಾ ಸೇವಿಸಿದ್ದರಿಂದ ಆಹಾರ ನಂಜಿಗೊಳಗಾಗಿ ತನ್ನ ಪುತ್ರಿಯು ಮೃತಪಟ್ಟಿದ್ದಾಳೆ ಎಂದು ಮಹಿಳೆಯೊಬ್ಬರು ಕಳೆದ ವರ್ಷ ದಾಖಲಿಸಿದ್ದ ಪ್ರಕರಣವನ್ನು ಪರಿಗಣನೆಗೆ ತೆಗೆದುಕೊಂಡ ಹೈಕೋರ್ಟ್, ತನ್ನ ಮಧ್ಯಂತರ ಆದೇಶದಲ್ಲಿ ಈ ನಿರ್ದೇಶನ ನೀಡಿದೆ.

“ಇಂತಹ ಘಟನೆಗಳು ಭವಿಷ್ಯದಲ್ಲಿ ಮತ್ತೆಂದೂ ಮರುಕಳಿಸದಂತೆ ಖಾತ್ರಿಗೊಳಿಸುವುದು ನ್ಯಾಯಾಲಯದ ಪ್ರಯತ್ನವಾಗಿದೆ. ಶವರ್ಮಾ ತಯಾರಿಕೆಯಲ್ಲಿ ಹಸಿ ಮೊಟ್ಟೆಯನ್ನು ಬಳಸಬಾರದು ಹಾಗೂ ಮಯೊನೇಸ್ (ಶವರ್ಮಾದೊಂದಿಗೆ ಯಾವಾಗಲೂ ಪೂರೈಸುವ ಖಾದ್ಯ) ಅನ್ನು ಸಂಗ್ರಹಿಸಿಡಬಾರದು ಎಂದು ಆಹಾರ ಸುರಕ್ಷತಾ ಆಯುಕ್ತರು ಕಳೆದ ವರ್ಷದ ಜನವರಿಯಲ್ಲಿ ಆದೇಶಿಸಿರುವುದು ನ್ಯಾಯಾಲಯಕ್ಕೆ ತಿಳಿದಿದೆ. ಹೀಗಿದ್ದೂ, ಇತ್ತೀಚೆಗೆ ಶವರ್ಮಾ ಸೇವಿಸಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಶಂಕಿತ ಘಟನೆಯು ನಮ್ಮ ಗಮನಕ್ಕೆ ಬಂದಿದೆ” ಎಂದು ನ್ಯಾ. ದೇವನ್ ರಾಮಚಂದ್ರನ್ ನೇತೃತ್ವದ ನ್ಯಾಯಪೀಠವು ಹೇಳಿತು.

ಇದಕ್ಕೂ ಮುನ್ನ, “ಸರ್ಕಾರದ ವತಿಯಿಂದ ಕಳೆದ ವರ್ಷ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ಶವರ್ಮಾ ಪಾರ್ಸೆಲ್ ಗಳ ಮೇಲೆ ತಯಾರಿಕಾ ದಿನಾಂಕ ಹಾಗೂ ಸಮಯವನ್ನು ನಮೂದಿಸಬೇಕು ಎಂದು ಉಪಾಹಾರ ಗೃಹಗಳಿಗೆ ನಿರ್ದೇಶನ ನೀಡಿರುವ ಆದೇಶಗಳೂ ಇವೆ” ಎಂದು ರಾಜ್ಯ ಆಹಾರ ಸುರಕ್ಷತಾ ಆಯುಕ್ತೆ ಅಫ್ಸಾನಾ ಪರ್ವೀನ್ ನ್ಯಾಯಪೀಠದ ಗಮನಕ್ಕೆ ತಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News