×
Ad

ರಾಹುಲ್ ಗಾಂಧಿ ನಾಲಿಗೆ ಕತ್ತರಿಸಿದವರಿಗೆ 11 ಲಕ್ಷ ಬಹುಮಾನ ಘೋಷಿಸಿದ್ದ ಶಾಸಕನ ವಿರುದ್ಧ ಪ್ರಕರಣ ದಾಖಲು

Update: 2024-09-17 11:28 IST

ಶಾಸಕ ಸಂಜಯ್ ಗಾಯಕ್ವಾಡ್ (Photo:X/@sanjaygaikwad34)

ಮಹಾರಾಷ್ಟ್ರ: ಅಮೆರಿಕದಲ್ಲಿ ಮೀಸಲಾತಿ ಕುರಿತು ಹೇಳಿಕೆ ನೀಡಿರುವ ರಾಹುಲ್ ಗಾಂಧಿ ಅವರ ನಾಲಿಗೆಯನ್ನು ಕತ್ತರಿಸುವವರಿಗೆ 11 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದ ಶಿವಸೇನಾ(ಶಿಂದೆ ಬಣ) ಶಾಸಕ ಸಂಜಯ್ ಗಾಯಕ್ವಾಡ್ ವಿರುದ್ಧ ಪ್ರಕರಣ ದಾಖಲಾಗಿದೆ.

ಬುಲ್ಧಾನ ಕ್ಷೇತ್ರದ ಶಿವಸೇನಾ(ಶಿಂದೆ ಬಣ) ಶಾಸಕ ಸಂಜಯ್ ಗಾಯಕ್ವಾಡ್ ಹೇಳಿಕೆ ಭಾರೀ ಟೀಕೆಗೆ ಕಾರಣವಾಗಿದ್ದು, ಕ್ರಮಕ್ಕೆ ಆಗ್ರಹ ವ್ಯಕ್ತವಾಗಿತ್ತು. ಇದರ ಬೆನ್ನಲ್ಲಿ ಸೋಮವಾರ ರಾತ್ರಿ ಪೊಲೀಸರು ಸಂಜಯ್ ಗಾಯಕ್ವಾಡ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ರಾಹುಲ್ ಗಾಂಧಿ ವಿದೇಶದಲ್ಲಿದ್ದಾಗ ಭಾರತದಲ್ಲಿ ಮೀಸಲಾತಿ ವ್ಯವಸ್ಥೆಯನ್ನು ಕೊನೆಗೊಳಿಸಲು ಬಯಸುವುದಾಗಿ ಹೇಳಿದ್ದರು. ಇದು ಕಾಂಗ್ರೆಸ್‌ನ ನೈಜ ಮುಖವನ್ನು ಬಯಲು ಮಾಡಿದೆ ಎಂದು ಗಾಯಕ್ವಾಡ್ ವಿವಾದಾತ್ಮಕ ಹೇಳಿಕೆ ನೀಡುವ ಮೊದಲು ಹೇಳಿದ್ದರು.

ಅಮೆರಿಕ ಪ್ರವಾಸದ ವೇಳೆ ರಾಹುಲ್ ಗಾಂಧಿ ಮೀಸಲಾತಿಗೆ ಅಂತ್ಯವಾಡುವ ಬಗ್ಗೆ ಮಾತನಾಡಿದ್ದರು. ಇದು ಮೀಸಲಾತಿಯನ್ನು ಅಂತರ್ಗತವಾಗಿ ವಿರೋಧಿಸುವ ಮನಸ್ಥಿತಿಯನ್ನು ತೋರಿಸುತ್ತದೆ. ರಾಹುಲ್ ಗಾಂಧಿಯವರ ನಾಲಿಗೆಯನ್ನು ಕತ್ತರಿಸಿದರೆ ನಾನು 11 ಲಕ್ಷ ರೂ. ಬಹುಮಾನ ನೀಡುತ್ತೇನೆ ಎಂದು ಗಾಯಕ್ವಾಡ್ ಹೇಳಿದ್ದರು.

ಗಾಯಕ್ವಾಡ್ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದು ಹೊಸದೇನಲ್ಲ. ಫೆಬ್ರವರಿ ತಿಂಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ಮಾಡಿದ್ದ ಸಂಜಯ್ ಗಾಯಕ್ವಾಡ್, 1987ರಲ್ಲಿ ನಾನು ಹುಲಿಯೊಂದನ್ನು ಬೇಟೆಯಾಡಿದ್ದೆ ಹಾಗೂ ಹುಲಿಯ ಉಗುರನ್ನು ನನ್ನ ಕುತ್ತಿಗೆಯ ಸುತ್ತ ಧರಿಸಿದ್ದೇನೆ ಎಂದು ಹೇಳಿಕೊಂಡಿದ್ದರು. ಇದರ ಬೆನ್ನಿಗೇ, ಅವರ ವಿರುದ್ಧ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಕಳೆದ ಮಾರ್ಚ್ ತಿಂಗಳಲ್ಲಿ ಪೊಲೀಸ್ ಲಾಠಿಯಿಂದ ಜನರ ಗುಂಪಿನ ಮೇಲೆ ಹಲ್ಲೆ ನಡೆಸಿ ಮತ್ತೊಮ್ಮೆ ವಿವಾದಕ್ಕೀಡಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News