×
Ad

ಮಧ್ಯಪ್ರದೇಶ| ಸಿಎಂ ಅಭ್ಯರ್ಥಿ ಘೋಷಿಸದ ಬಿಜೆಪಿ: ಪಕ್ಷದಲ್ಲಿ ಬೇಗುದಿ

Update: 2023-10-08 10:37 IST

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ (PTI)

ಭೋಪಾಲ್: ಪ್ರಮುಖ ವಿಧಾನಸಭಾ ಚುನಾವಣೆಗೆ ಮಧ್ಯಪ್ರದೇಶ ಸಜ್ಜಾಗಿರುವ ನಡುವೆಯೇ ಆಡಳಿತಾರೂಢ ಬಿಜೆಪಿಯಲ್ಲಿ ಅಸಮಾಧಾನ ಬೂದಿಮುಚ್ಚಿದ ಕೆಂಡವಾಗಿದೆ. ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೇ ಚುನಾವಣೆ ಎದುರಿಸಲು ಪಕ್ಷದ ಹೈಕಮಾಂಡ್ ನಿರ್ಧರಿಸಿದ್ದು, ಹಾಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಅವರನ್ನು ಕಂಗೆಡಿಸಿದೆ. ನಮ್ಮ ಸರ್ಕಾರ ಮುಂದುವರಿಯಬೇಕೇ ಬೇಡವೇ ಎಂದು ರ್ಯಾಲಿಯೊಂದರಲ್ಲಿ ಸಿಎಂ, ಜನತೆಯನ್ನು ಪ್ರಶ್ನಿಸಿರುವುದು ಬಿಜೆಪಿ ವರಿಷ್ಠರಿಗೆ ತಲೆನೋವು ತಂದಿದೆ.

ಆದಿವಾಸಿಗಳ ಪ್ರಾಬಲ್ಯದ ದಿಂಡೋರಿ ಜಿಲ್ಲೆಯಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಶಿವರಾಜ್ ಸಿಂಗ್, "ನಾನು ಒಳ್ಳೆಯ ಸರ್ಕಾರ ನಡೆಸುತ್ತಿದ್ದೇನೆಯೇ ಅಥವಾ ಕೆಟ್ಟ ಸರ್ಕಾರ ನಡೆಸುತ್ತಿದ್ದೇನೆಯೇ ಎಂದು ನಾನು ಕೇಳಬಯಸುತ್ತೇನೆ. ಈ ಸರ್ಕಾರ ಮುಂದುವರಿಯಬೇಕೇ ಅಥವಾ ಬೇಡವೇ? ಮಾಮಾ ಮುಖ್ಯಮಂತ್ರಿಯಾಗಬೇಕೇ ಅಥವಾ ಬೇಡವೇ" ಎಂದು ಸಭಿಕರನ್ನು ಉದ್ದೇಶಿಸಿ ಪ್ರಶ್ನಿಸಿದರು.

ಅಂತೆಯೇ ನರೇಂದ್ರ ಮೋದಿ ಪ್ರಧಾನಿಯಾಗಿ ಮಂದುವರಿಯಬೇಕೇ ಬೇಡವೇ ಎಂದೂ ಪ್ರಶ್ನಿಸಿದರು. ಸಭಿಕರಿಂದ ಎರಡೂ ಪ್ರಶ್ನೆಗಳಿಗೆ, "ಮುಂದುವರಿಯಬೇಕು" ಎಂಬ ಉತ್ತರ ಬಂತು.

ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ 2018 ಮತ್ತು 2020ರ ನಡುವಿನ 18 ತಿಂಗಳ ಅವಧಿಯನ್ನು ಹೊರತುಪಡಿಸಿದರೆ, ಸುಧೀರ್ಘ ಅವಧಿಗೆ ರಾಜ್ಯದ ಮುಖ್ಯಮಂತ್ರಿ ಎನಿಸಿಕೊಂಡಿರುವ ಚೌಹಾಣ್ 2005ರಿಂದ ರಾಜ್ಯದ ಚುಕ್ಕಾಣಿ ಹಿಡಿದಿದ್ದಾರೆ. ಭಾವನಾತ್ಮಕವಾಗಿ ಸಭೆಗಳಲ್ಲಿ ಮಾತನಾಡುತ್ತಿರುವ ಮುಖ್ಯಮಂತ್ರಿ ಕೆಲವೆಡೆ ಕಣ್ಣೀರು ಸುರಿಸಿದ ನಿದರ್ಶನಗಳೂ ಇವೆ. ಕಳೆದ ವಾರ ತಮ್ಮ ತವರು ಜಿಲ್ಲೆ ಸೆಹೋರ್‍ನಲ್ಲಿ, "ನನ್ನಂಥ ಸಹೋದರ ನಿಮಗೆ ಸಿಗಲಾರರು. ನಾನು ನಿಮ್ಮ ಸುತ್ತ ಇಲ್ಲದ ಸಂದರ್ಭದಲ್ಲಿ ನೀವು ನನ್ನನ್ನು ಹೆಚ್ಚು ನೆನಪಿಸಿಕೊಳ್ಳುತ್ತೀರಿ" ಎಂದು ಭಾವುಕರಾಗಿ ನುಡಿದಿದ್ದರು.

230 ಸದಸ್ಯಬಲದ ವಿಧಾನಸಭೆಗೆ ಸದ್ಯದಲ್ಲೇ ಚುನಾವಣೆ ಘೋಷಣೆಯಾಗಲಿದೆ. ನರೇಂದ್ರ ಮೋದಿ ಹೆಸರಿನಲ್ಲಿ ಚುನಾವಣೆ ಎದುರಿಸಲು ಬಿಜೆಪಿ ನಿರ್ಧರಿಸಿದ್ದು, ಸಿಎಂ ಮುಖವನ್ನು ಪರಿಚಯಿಸದಿರಲು ತೀರ್ಮಾನಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News