ಮಹಾರಾಷ್ಟ್ರ |ಮೋದಿ ವಿರುದ್ಧ ಪೋಸ್ಟ್ ಮಾಡಿದ ಕಾಂಗ್ರೆಸ್ ನಾಯಕನಿಗೆ ಬಲವಂತದಿಂದ ಸೀರೆ ಉಡಿಸಿದ ಬಿಜೆಪಿ ಕಾರ್ಯಕರ್ತರು
PC : X
ಕಲ್ಯಾಣ,ಸೆ.23: ಹಿರಿಯ ಕಾಂಗ್ರಸ್ ನಾಯಕ ಪ್ರಕಾಶ ‘ಮಾಮಾ’ ಪಗಾರೆಯವರು ಪ್ರಧಾನಿ ನರೇಂದ್ರ ಮೋದಿಯವರು ಸೀರೆಯುಟ್ಟಿರುವ ಮಾರ್ಫ್ ಮಾಡಲಾದ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಬಳಿಕ ಮಂಗಳವಾರ ಥಾಣೆ ಜಿಲ್ಲೆಯ ಡೊಂಬಿವಲಿಯಲ್ಲಿ ರಾಜಕೀಯ ಬಿರುಗಾಳಿಯೆದ್ದಿದೆ. ಇದು ಆಕ್ರೋಶ, ಪ್ರತಿಭಟನೆಗಳು ಹಾಗೂ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಾಟಕೀಯ ಬೀದಿ ಸಂಘರ್ಷಕ್ಕೆ ಕಾರಣವಾಯಿತು.
ಬಿಜೆಪಿ ನಾಯಕರು ಅವಹೇಳನಕಾರಿ ಎಂದು ಬಣ್ಣಿಸಿರುವ ಹಾಡಿನೊಂದಿಗೆ ಪೋಸ್ಟ್‌ನ್ನು ಹಂಚಿಕೊಳ್ಳಲಾಗಿತ್ತು.
73ರ ಹರೆಯದ ಪಗಾರೆ ತನ್ನ ನೇರ ನಡೆನುಡಿಯ ವ್ಯಕ್ತಿತ್ವಕ್ಕಾಗಿ ಉಲ್ಲಾಸ ನಗರ ಪ್ರದೇಶದಲ್ಲಿ ಹೆಸರುವಾಸಿಯಾಗಿದ್ದಾರೆ. ಆದಾಗ್ಯೂ ಈ ಪೋಸ್ಟ್ ಬಿಜೆಪಿ ಕಾರ್ಯಕರ್ತರಲ್ಲಿ ಆಕ್ರೋಶವನ್ನುಂಟು ಮಾಡಿದ್ದು,ಈ ಕೃತ್ಯವು ದೇಶದ ಅತ್ಯುನ್ನತ ನಾಯಕನಿಗೆ ಮಾಡಿರುವ ಅವಮಾನ ಎಂದು ಅವರು ಕಿಡಿಕಾರಿದ್ದಾರೆ.
ಇದಕ್ಕೆ ಪ್ರತೀಕಾರವಾಗಿ ಬಿಜೆಪಿ ಕಾರ್ಯಕರ್ತರು ಪಗಾರೆಯವರನ್ನು ಅವರ ಮನೆಯಿಂದ ಹೊರಗೆ ಕರೆಸಿ ಬಲವಂತದಿಂದ ಸೀರೆಯನ್ನು ತೊಡಿಸಿದ್ದಾರೆ. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿಜೆಪಿಯ ಕಲ್ಯಾಣ ಜಿಲ್ಲಾಧ್ಯಕ್ಷ ನಂದು ಪರಬ್ ಅವರು ಪಗಾರೆಯವರ ಕೃತ್ಯವನ್ನು ಬಲವಾಗಿ ಖಂಡಿಸಿದರು.
‘ನಮ್ಮ ಪ್ರಧಾನಿಯವರ ಇಂತಹ ಅಸಹ್ಯಕರ ಚಿತ್ರವನ್ನು ಪೋಸ್ಟ್ ಮಾಡಿದ್ದು ಅವಮಾನಕರ ಮಾತ್ರವಲ್ಲ, ಅದು ಸ್ವೀಕಾರಾರ್ಹವೂ ಅಲ್ಲ. ನಮ್ಮ ನಾಯಕರ ಮಾನಹಾನಿಗೆ ಇಂತಹ ಪ್ರಯತ್ನಗಳು ಮತ್ತೆ ನಡೆದರೆ ಬಿಜೆಪಿ ಇನ್ನೂ ಬಲವಾದ ಉತ್ತರವನ್ನು ನೀಡುತ್ತದೆ’ ಎಂದರು.
ಬಿಜೆಪಿಯ ಪ್ರತಿಕ್ರಿಯೆಯನ್ನು ಕಾಂಗ್ರೆಸ್ ಕಟುವಾಗಿ ಟೀಕಿಸಿದೆ.
73ರ ಹರೆಯದ ಪಗಾರೆ ಪಕ್ಷದ ಹಿರಿಯ ಕಾರ್ಯಕರ್ತರಾಗಿದ್ದಾರೆ. ಅವರು ಆಕ್ಷೇಪಾರ್ಹವಾದ ಏನನ್ನಾದರೂ ಪೋಸ್ಟ್ ಮಾಡಿದ್ದರೆ ಬಿಜೆಪಿಯು ಅವರನ್ನು ದಾರಿ ತಪ್ಪಿಸುವ ಮತ್ತು ಬಲವಂತದಿಂದ ಸೀರೆ ಉಡಿಸುವ ಬದಲು ಪೋಲಿಸ್ ದೂರನ್ನು ದಾಖಲಿಸಬೇಕಿತ್ತು. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿಯಾಗಿದೆ ಎಂದು ಕಲ್ಯಾಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೋತೆ ಸುದ್ದಿಸಂಸ್ಥೆಗೆ ತಿಳಿಸಿದರು.
ಬಿಜೆಪಿ ಬೆಂಬಲಿಗರು ಆಗಾಗ್ಗೆ ಕಾಂಗ್ರೆಸ್‌ನ ಉನ್ನತ ನಾಯಕರ ವಿರುದ್ಧ ಅವಮಾನಕಾರಿ ವಿಷಯವನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಆದರೆ ಪಕ್ಷದ ಕಾರ್ಯಕರ್ತರು ಅವರಂತೆ ವರ್ತಿಸಿಲ್ಲ ಎಂದು ಆರೋಪಿಸಿದ ಪೋತೆ, ‘ಈ ಘಟನೆಯಲ್ಲಿ ಭಾಗಿಯಾಗಿದ್ದವರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ನಾವು ಪೋಲಿಸರನ್ನು ಆಗ್ರಹಿಸುತ್ತೇವೆ ’ ಎಂದು ಹೇಳಿದರು.