ʼಪೋಸ್ಟ್ʼ ಹಾಕಿದ ವ್ಯಕ್ತಿಯ ಪ್ರತಿಕ್ರಿಯೆ ಪಡೆಯದೆ ಸಾಮಾಜಿಕ ಜಾಲತಾಣಗಳಿಂದ ಅದನ್ನು ತೆಗೆದುಹಾಕಬಾರದು : ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ ವ್ಯಕ್ತಿಯ ಪ್ರತಿಕ್ರಿಯೆ ಪಡೆಯದೆ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಬಾರದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದ್ದು, ನಿರ್ದಿಷ್ಟವಾಗಿ ಪೋಸ್ಟ್ ಮಾಡಿರುವ ವ್ಯಕ್ತಿಯನ್ನು ಗುರುತಿಸಲು ಸಾಧ್ಯವಾಗದಿದ್ದಾಗ ಮಾತ್ರ ಸಾಮಾಜಿಕ ಮಾಧ್ಯಮ ವೇದಿಕೆಯಿಂದ ತೆಗೆದುಹಾಕಲು ನೋಟಿಸ್ ಜಾರಿ ಮಾಡಬೇಕು ಎಂದು ಹೇಳಿದೆ.
ಸಾಫ್ಟ್ ವೇರ್ ಫ್ರೀಡಂ ಲಾ ಸೆಂಟರ್ ಇಂಡಿಯಾ (ಎಸ್ಎಫ್ಎಲ್‌ಸಿ) ಪರವಾಗಿ ವಕೀಲೆ ಇಂದಿರಾ ಜೈಸಿಂಗ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಭೂಷಣ್ ಆರ್ ಗವಾಯಿ ಮತ್ತು ಎಜಿ ಮಸಿಹ್ ಅವರ ಪೀಠ, ಪೋಸ್ಟ್ ಅನ್ನು ಗುರುತಿಸಬಹುದಾದ ವ್ಯಕ್ತಿ ಮಾಡಿದ್ದರೆ, ಪೋಸ್ಟ್‌ಗೆ ನಿರ್ಬಂಧಿಸುವ ಮೊದಲು ಅವರಿಗೆ ನೋಟಿಸ್ ನೀಡಬೇಕು ಎಂದು ಪ್ರಾಥಮಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಈ ಕುರಿತು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಮೂರು ವಾರಗಳಲ್ಲಿ ಪ್ರತಿಕ್ರಿಯಿಸುವಂತೆ ಸೂಚಿಸಿದೆ.
ಎಸ್ಎಫ್ಎಲ್‌ಸಿಯ ಅರ್ಜಿಯು, ಮಾಹಿತಿ ತಂತ್ರಜ್ಞಾನ ನಿಯಮ-2009ರ ಅಡಿಯಲ್ಲಿ ಅಸ್ತಿತ್ವದಲ್ಲಿರುವ ಚೌಕಟ್ಟು ನೈಸರ್ಗಿಕ ನ್ಯಾಯದ ತತ್ವಗಳಿಗೆ ಬದ್ಧವಾಗಿಲ್ಲ, ಏಕೆಂದರೆ ಪೋಸ್ಟ್‌ಗಳನ್ನು ತೆಗೆದುಹಾಕುವ ಮೊದಲು ಸೂಚನೆ ನೀಡಲಾಗುತ್ತಿಲ್ಲ ಎಂದು ವಾದಿಸಿದೆ.