×
Ad

ಮುಂದಿನ ಚುನಾವಣೆಗಳ ಬಗ್ಗೆ ‘ಇಂಡಿಯಾ’ ಪಕ್ಷಗಳು ಮಾತುಕತೆ ನಡೆಸಬೇಕು: ಸಿಬಲ್

Update: 2025-02-11 21:45 IST

ಕಪಿಲ್ ಸಿಬಲ್ | PC : PTI 

ಹೊಸದಿಲ್ಲಿ: ಒಮ್ಮತದೊಂದಿಗೆ ಎಲ್ಲರನ್ನೂ ಜೊತೆಗೆ ಕರೆದೊಯ್ಯಲು ಕಾಂಗ್ರೆಸ್ ಯಾವಾಗಲೂ ಪ್ರಯತ್ನಿಸುತ್ತದೆ ಎಂದು ಮಂಗಳವಾರ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಹೇಳಿದ್ದಾರೆ ಹಾಗೂ ಮುಂದೆ ಚುನಾವಣೆಗಳನ್ನು ಹೇಗೆ ಎದುರಿಸಬೇಕು ಮತ್ತು ಗೊಂದಲವನ್ನು ಹೇಗೆ ಪರಿಹರಿಸಬೇಕು ಎಂಬ ಬಗ್ಗೆ ಚರ್ಚಿಸಲು ‘ಇಂಡಿಯಾ’ ಮೈತ್ರಿಕೂಟದ ಘಟಕ ಪಕ್ಷಗಳು ಕುಳಿತು ಮಾತನಾಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹರ್ಯಾಣ, ಗೋವಾ, ಗುಜರಾತ್ ಮತ್ತು ಇತರ ಸ್ಥಳಗಳಲ್ಲಿ ಕಾಂಗ್ರೆಸ್ ವಿರುದ್ಧ ಆಮ್ ಆದ್ಮಿ ಪಕ್ಷ (ಆಪ್)ವು ಅಭ್ಯರ್ಥಿಗಳನ್ನು ನಿಲ್ಲಿಸಿದ್ದಾಗ ಅದರ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ರಿಗೂ ಪ್ರಶ್ನೆಗಳನ್ನು ಕೇಳಬೇಕಾಗಿತ್ತು ಎಂದು ಹೇಳಿದರು.

‘‘ಎಲ್ಲರನ್ನೂ ಒಮ್ಮತದೊಂದಿಗೆ ಕರೆದೊಯ್ಯಲು ಕಾಂಗ್ರೆಸ್ ಯಾವತ್ತೂ ಪ್ರಯತ್ನಿಸುತ್ತದೆ. ಕೆಲವೊಮ್ಮೆ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಬಿಹಾರದಲ್ಲಿ ಚುನಾವಣೆ ನಡೆದಾಗ ಮತ್ತು ಕಾಂಗ್ರೆಸ್‌ಗೆ ನಿರೀಕ್ಷಿತ ನಿರ್ವಹಣೆ ನೀಡಲು ಸಾಧ್ಯವಾಗದಾಗ, ಕಾಂಗ್ರೆಸ್‌ನಿಂದಾಗಿ ತನಗೆ ಅಧಿಕಾರಕ್ಕೆ ಬರಲು ಸಾಧ್ಯವಾಗಲಿಲ್ಲ ಎಂದು ಆರ್‌ಜೆಡಿ ಹೇಳಿದೆ’’ ಎಂದು ಸಿಬಲ್ ನುಡಿದರು.

‘‘ಚುನಾವಣೆಗಳನ್ನು ಹೇಗೆ ಎದುರಿಸಬೇಕು ಎನ್ನುವುದನ್ನು ಪ್ರತಿಯೊಬ್ಬರೂ ನಿರ್ಧರಿಸಬೇಕು. ಬಿಜೆಪಿಗೆ ಒಂದೇ ಅಧಿಕಾರ ಕೇಂದ್ರವಿರುವುದರಿಂದ ಅದಕ್ಕೆ ಲಾಭವಾಗಿದೆ. ಉತ್ತರಪ್ರದೇಶದಲ್ಲಿ, ಕಾಂಗ್ರೆಸ್ ಸಮಾಜವಾದಿ ಪಕ್ಷದೊಂದಿಗೆ ಸೇರಿಕೊಂಡು ಚುನಾವಣೆ ಎದುರಿಸಿದೆ. ಅದರಿಂದ ಲಾಭವಾಗಿದೆ. ತಮಿಳುನಾಡಿನಲ್ಲೂ ಇದೇ ರೀತಿ ನಡೆದಿದೆ. ಹಾಗಾಗಿ, ತಾವು ಹೇಗೆ ಮುಂದುವರಿಯಬೇಕು ಎನ್ನುವ ಬಗ್ಗೆ ಈ ಪಕ್ಷಗಳು ತಮ್ಮೊಳಗೆ ಮಾತುಕತೆ ನಡೆಸಬೇಕಾಗಿದೆ’’ ಎಂದು ಮಾಜಿ ಕಾಂಗ್ರೆಸ್ ನಾಯಕ ಸಿಬಲ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News