×
Ad

ಸಿಕ್ಕಿಂ ಭೂಕುಸಿತ | ಸಾವಿರಾರು ಜನರು ಅತಂತ್ರ

Update: 2025-06-01 22:13 IST

Photo Credit: ANI

ಗ್ಯಾಂಗ್ಟಕ್: ಭಾರೀ ಮಳೆಯಿಂದಾಗಿ ಸಿಕ್ಕಿಮ್‌ನಾದ್ಯಂತ ಸರಣಿ ಭೂಕುಸಿತಗಳು ಸಂಭವಿಸಿದ್ದು,ಸುಮಾರು 1,500 ಪ್ರವಾಸಿಗಳು ಅತಂತ್ರರಾಗಿದ್ದಾರೆ.

ಉತ್ತರ ಸಿಕ್ಕಿಮ್‌ನಲ್ಲಿ ಪ್ರಮುಖ ರಸ್ತೆ ಸಂಪರ್ಕಗಳು ಕಡಿತಗೊಂಡಿವೆ. ಪರಿಸ್ಥಿತಿ ಇನ್ನೂ ಅನಿಶ್ಚಿತವಾಗಿದ್ದು ನಿರಂತರವಾಗಿ ಸುರಿಯುತ್ತಿರುವ ಮಳೆ ಮತ್ತು ಉಕ್ಕಿ ಹರಿಯುತ್ತಿರುವ ತೀಸ್ತಾ ನದಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯನ್ನುಂಟು ಮಾಡಿವೆ. ಗುರುವಾರ ಮಂಗನ್ ಜಿಲ್ಲೆಯ ಲಾಚೆನ್-ಲಚುಂಗ್ ಹೆದ್ದಾರಿಯಲ್ಲಿ ಮುನ್ಸಿಥಾಂಗ್ ಬಳಿ ಪ್ರವಾಸಿ ವಾಹನವೊಂದು ತೀಸ್ತಾ ನದಿಗೆ ಉರುಳಿ ಬಿದ್ದ ಬಳಿಕ ಕನಿಷ್ಠ ಓರ್ವ ವ್ಯಕ್ತಿ ಮೃತಪಟ್ಟಿದ್ದು,ಇಬ್ಬರು ಗಾಯಗೊಂಡಿದ್ದಾರೆ. ಇತರ ಎಂಟು ಪ್ರವಾಸಿಗಳು ನಾಪತ್ತೆಯಾಗಿದ್ದಾರೆ.

ಮಂಗನ್,ಗ್ಯಾಲ್ಶಿಂಗ್ ಮತ್ತು ಸೊರೆಂಗ್ ಜಿಲ್ಲೆಗಳಲ್ಲಿ ಪ್ರವಾಹ ಮತ್ತು ಇನಷ್ಟು ಭೂಕುಸಿತಗಳ ಸಂಭವನೀಯತೆಯ ಕುರಿತು ಭಾರತೀಯ ಹವಾಮಾನ ಇಲಾಖೆಯ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣೆ ಪ್ರಾಧಿಕಾರವು ಶನಿವಾರ ರೆಡ್ ಅಲರ್ಟ್ ಹೊರಡಿಸಿತ್ತು.

ಚುಂಗ್‌ಥಾಂಗ್‌ನ್ನು ಲಾಚೆನ್ ಮತ್ತು ಲಚುಂಗ್‌ ಗೆ ಸಂಪರ್ಕಿಸುವ ಮುಖ್ಯ ರಸ್ತೆಯುದ್ದಕ್ಕೂ ಹಲವಾರು ಭೂಕುಸಿತಗಳು ಸಂಭವಿಸಿದ್ದು, ಗಮನಾರ್ಹ ಸಂಖ್ಯೆಯಲ್ಲಿ ಪ್ರವಾಸಿಗಳು ಸಿಕ್ಕಿ ಹಾಕಿಕೊಂಡಿದ್ದಾರೆ. ಲಾಚೆನ್‌ನಲ್ಲಿ 112 ಮತ್ತು ಲಾಚುಂಗ್‌ನಲ್ಲಿ 1,350 ಪ್ರವಾಸಿಗಳು ಸುರಕ್ಷಿತ ಮಾರ್ಗಕ್ಕಾಗಿ ಕಾಯುತ್ತಿದ್ದಾರೆ ಎಂದು ಮಂಗನ್ ಜಿಲ್ಲಾಡಳಿತವು ದೃಢಪಡಿಸಿದೆ.

ಚುಂಗ್‌ಥಾಂಗ್‌ನಲ್ಲಿ ತೀಸ್ತಾ ನದಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಮಂಗನ್‌ ನ್ನು ಚುಂಗ್‌ಥಾಂಗ್‌ ಗೆ ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿರುವ ಫಿಡಾಂಗ್ ಬೈಲಿ ಸೇತುವೆಯು ತೀಸ್ತಾದ ಭೀಕರ ಪ್ರವಾಹದಿಂದ ಭಾಗಶಃ ಹಾನಿಗೀಡಾಗಿದ್ದು,ರೊಂಗು ವಿಧಾನಸಭಾ ಕ್ಷೇತ್ರದ 13 ಗ್ರಾಮ ಪಂಚಾಯತ್‌ಗಳ ವ್ಯಾಪಿಯ ಸಾವಿರಾರು ಜನರು ಹೊರಜಗತ್ತಿನ ಸಂಪರ್ಕವನ್ನು ಕಳೆದುಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News