×
Ad

ವಾಂಗ್ಚುಕ್ ಮತ್ತಿತರರು ಬಿಡುಗಡೆಯಾಗುವವರೆಗೂ ಕೇಂದ್ರ ಸರಕಾರದೊಂದಿಗೆ ಮಾತುಕತೆ ಇಲ್ಲ: ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್

Update: 2025-09-30 16:48 IST

ಅಗ್ಸರ್ ಅಲಿ ಕರ್ಬಲಾಯಿ | Photo Credit: PTI

ಲೇಹ್: ಸೋನಂ ವಾಂಗ್ಚುಕ್ ಸೇರಿದಂತೆ ಎಲ್ಲ ಬಂಧಿತ ಹೋರಾಟಗಾರರನ್ನು ಬಿಡುಗಡೆಗೊಳಿಸುವವರೆಗೆ ಹಾಗೂ ಲೇಹ್ ನಲ್ಲಿ ನಡೆದ ಪೊಲೀಸ್ ಫೈರಿಂಗ್ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸುವವರೆಗೆ ಕೇಂದ್ರ ಸರಕಾರದೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ ಘೋಷಿಸಿದೆ.

ಮಂಗಳವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ ನ ಸಹ ಅಧ್ಯಕ್ಷ ಅಗ್ಸರ್ ಅಲಿ ಕರ್ಬಲಾಯಿ, “ಸೋನಂ ವಾಂಗ್ಚುಕ್ ಬಿಡುಗಡೆಯಾಗುವವರೆಗೆ, ಬಂಧನಗಳು ನಿಲ್ಲುವವರೆಗೆ ಹಾಗೂ ಸೆಪ್ಟೆಂಬರ್ 24ರಂದು ನಡೆದ ಘಟನೆಯ ಬಗ್ಗೆ ತನಿಖೆಗೆ ಆದೇಶಿಸುವವರೆಗೆ ನಾವು ಕೇಂದ್ರ ಸರಕಾರದೊಂದಿಗೆ ಮಾತುಕತೆಯಲ್ಲಿ ಭಾಗಿಯಾಗುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

ಲಡಾಖ್ ಪ್ರಜೆಗಳನ್ನು ದೇಶ ವಿರೋಧಿಗಳು ಎಂದು ಬಿಂಬಿಸುತ್ತಿರುವ ಸರಕಾರದ ನಡೆಯನ್ನೂ ಖಂಡಿಸಿದ ಕರ್ಬಲಾಯಿ, ಇದು ರಾಷ್ಟ್ರೀಯ ಸೇವೆಗೆ ದೀರ್ಘಕಾಲದಿಂದ ಕೊಡುಗೆ ನೀಡಿರುವವರಿಗೆ ಮಾಡುತ್ತಿರುವ ಅವಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ನಮಗೆ ದೇಶಭಕ್ತಿಯ ಪ್ರಮಾಣ ಪತ್ರಗಳ ಅಗತ್ಯವಿಲ್ಲ. ಲಡಾಖ್ ಜನರನ್ನು ದೇಶ ದ್ರೋಹಿಗಳು ಎಂದು ಚಿತ್ರಿಸುವುದನ್ನು ನಿಲ್ಲಿಸಿ” ಎಂದು ಅವರು ಆಗ್ರಹಿಸಿದರು.

ಕೇಂದ್ರ ಸರಕಾರದೊಂದಿಗಿನ ಮಾತುಕತೆಯನ್ನು ಅಮಾನತುಗೊಳಿಸುವ ಲೇಹ್ ಅಪೆಕ್ಸ್ ಬಾಡಿಯ ಸೋಮವಾರದ ನಿರ್ಧಾರವನ್ನು ಬೆಂಬಲಿಸಿದ ಕರ್ಬಲಾಯಿ, “ಯಾವುದೇ ಮಾತುಕತೆ ಮುಂದುವರಿಯುವುದಕ್ಕೂ ಮುನ್ನ ಲಡಾಖ್ ನಲ್ಲಿ ಸಹಜ ಸ್ಥಿತಿ ಮರುಸ್ಥಾಪಿಸಬೇಕು” ಎಂದು ಒತ್ತಾಯಿಸಿದರು.

ಈ ಬೇಡಿಕೆಯನ್ನು ಪುನರುಚ್ಚರಿಸಿದ ಲೇಹ್ ಅಪೆಕ್ಸ್ ಬಾಡಿ ನಾಯಕರಾದ ತುಪ್ ಸ್ತಾನ್ ಛೆವಾಂಗ್ ಮತ್ತು ಚೆರಿಂಗ್ ದೊರ್ಜಾಯ್, ಎಲ್ಲ ಹೋರಾಟಗಾರರನ್ನೂ ಬೇಷರತ್ತಾಗಿ ಬಿಡುಗಡೆಗೊಳಿಸಬೇಕು ಹಾಗೂ ಪೊಲೀಸ್ ಫೈರಿಂಗ್ ಘಟನೆಯ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಸೆಪ್ಟೆಂಬರ್ 24ರಂದು ನಡೆದ ಲೇಹ್ ಬಂದ್ ಆಚರಣೆಯ ವೇಳೆ ಭದ್ರತಾ ಪಡೆಗಳು ಹಾಗೂ ಪ್ರತಿಭಟನಾಕಾರರ ನಡುವೆ ನಡೆದ ಘರ್ಷಣೆಯಲ್ಲಿ ನಾಲ್ವರು ಮೃತಪಟ್ಟು, ಹತ್ತಾರು ಮಂದಿ ಗಾಯಗೊಂಡಿದ್ದರು. ಈ ಸಂಬಂಧ, ಸುಮಾರು 50 ಮಂದಿಯನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಿ, ಜೋಧಪುರ್ ಕೇಂದ್ರ ಕಾರಾಗೃಹಕ್ಕೆ ರವಾನಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News