ಸೋನಂ ವಾಂಗ್ಚುಕ್ ರನ್ನು ದೇಶದ್ರೋಹಿ ಎಂದು ಪ್ರಚಾರ ಮಾಡಲಾಗುತ್ತಿದೆ: ಸೋನಂ ವಾಂಗ್ಚುಕ್ ಪತ್ನಿಯಿಂದ ಆರೋಪ
Gitanjali J Angmo, wife of climate activist Sonam Wangchuk (PC |PTI )
ಹೊಸದಿಲ್ಲಿ: ಗುರಿಯಾಗಿಸಿಕೊಂಡ ಬೇಟೆಯ ಭಾಗವಾಗಿ ಶಿಕ್ಷಣ ಸುಧಾರಕ ಹಾಗೂ ಹೋರಾಟಗಾರ ಸೋನಂ ವಾಂಗ್ಚುಕ್ ಹಾಗೂ ಅವರ ಸಂಸ್ಥೆಯ ವಿರುದ್ಧ ಆಧಾರವಿಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ, ಅವರನ್ನು ದೇಶದ್ರೋಹಿ ಎಂದು ಬಿಂಬಿಸಲಾಗುತ್ತಿದೆ ಎಂದು ಅವರ ಪತ್ನಿ ಹಾಗೂ ಹಿಮಾಲಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ಸ್ ಲಡಾಖ್ ನ ಸಹ ಸಂಸ್ಥಾಪಕಿ ಗೀತಾಂಜಲಿ ಆಂಗ್ಮೊ ಆರೋಪಿಸಿದ್ದಾರೆ.
ಲಡಾಖ್ ಗೆ ರಾಜ್ಯದ ಸ್ಥಾನಮಾನ ನೀಡಬೇಕು ಹಾಗೂ ಸಂವಿಧಾನದ ಆರನೆಯ ಪರಿಚ್ಛೇದವನ್ನು ವಿಸ್ತರಿಸಬೇಕು ಎಂದು ನಡೆಯುತ್ತಿರುವ ಹೋರಾಟದ ಮುಂಚೂಣಿಯಲ್ಲಿದ್ದ ಸೋನಂ ವಾಂಗ್ಚುಕ್ ಅವರನ್ನು ಸೆಪ್ಟೆಂಬರ್ 24ರಂದು ನಡೆದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಶುಕ್ರವಾರ ಲೇಹ್ ನಿಂದ ಬಂಧಿಸಲಾಗಿತ್ತು. ನಂತರ ಅವರನ್ನು ರಾಜಸ್ಥಾನದ ಜೋಧಪುರ್ ಗೆ ಸ್ಥಳಾಂತರಿಸಲಾಗಿತ್ತು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಗೀತಾಂಜಲಿ ಆಂಗ್ಮೊ, ಸೋನಂ ವಾಂಗ್ಚುಕ್ ಅವರಿಗೆ ಪಾಕಿಸ್ತಾನದ ಸಂಪರ್ಕವಿದೆ ಎಂಬ ಆರೋಪಗಳು ಸೇರಿದಂತೆ ಎಲ್ಲ ಆರೋಪಗಳ ಕುರಿತು ಬಹಿರಂಗ ಚರ್ಚೆಗೆ ಬರುವಂತೆ ಪ್ರಾಧಿಕಾರಗಳಿಗೆ ಸವಾಲು ಹಾಕಿದರು. ನನಗೆ ಸೋನಂ ವಾಂಗ್ಚುಕ್ ರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಅಥವಾ ಅವರ ವಿರುದ್ಧ ಇರುವ ಆರೋಪಗಳನ್ನು ವಿವರಿಸುವ ದಾಖಲೆಗಳನ್ನು ಜಿಲ್ಲಾಡಳಿತ ಒದಗಿಸಿಲ್ಲ ಎಂದೂ ಅವರು ದೂರಿದರು.
“ಸೋನಂ ವಾಂಗ್ಚುಕ್ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಹೇರುವ ಅಗತ್ಯವಿರಲಿಲ್ಲ. ಅವರು ಏಕಮುಖ ನಿರೂಪಣೆ ನೀಡುತ್ತಿದ್ದಾರೆ” ಎಂದು ಆರೋಪಿಸಿದ ಗೀತಾಂಜಲಿ ಅಂಗ್ಮೊ, “ನನಗೆ ಬಹುತೇಕ ಗೃಹ ಬಂಧನದಲ್ಲಿರುವಂತೆ ಭಾಸವಾಗುತ್ತಿದ್ದು, ಈ ಕುರಿತು ಮಾತನಾಡಲು ರಾಷ್ಟ್ರ ರಾಜಧಾನಿಗೆ ಪ್ರಯಾಣ ಬೆಳೆಸಲು ನಿರ್ಧರಿಸಿದೆ” ಎಂದು ಅಳಲು ತೋಡಿಕೊಂಡಿದ್ದಾರೆ.