ತುರ್ತು ಪರಿಸ್ಥಿತಿಯ 50ನೇ ವರ್ಷದ ಪ್ರಯುಕ್ತ ಜೂನ್ 25ರಂದು ವಿಶೇಷ ಸಂಸತ್ ಅಧಿವೇಶನ?
ಜೈರಾಮ್ ರಮೇಶ್ | PC : PTI
ಹೊಸದಿಲ್ಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿಗೆ 50 ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ, ಜೂನ್ 25ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ವಿಶೇಷ ಸಂಸತ್ ಅಧಿವೇಶನ ಆಯೋಜಿಸಲು ಯೋಜಿಸುತ್ತಿದೆ ಎಂದು ಬುಧವಾರ ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ (ಸಂವಹನ), "ಪಹಲ್ಗಾಮ್ ದಾಳಿ ಹಾಗೂ ನಂತರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಎಪ್ರಿಲ್ 22ರಿಂದಲೇ ಸರ್ವಪಕ್ಷಗಳ ಸಭೆ ನಡೆಸಬೇಕು ಹಾಗೂ ಈ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತಾ ಬಂದಿದೆ. ಆದರೆ, ಈವರೆಗೂ ಸರ್ವಪಕ್ಷಗಳ ಸಭೆ ನಡೆದಿಲ್ಲ" ಎಂದು ಟೀಕಿಸಿದ್ದಾರೆ.
"ನಿರ್ಣಯವೊಂದರ ಮೂಲಕ ದೇಶದ ಸಾಮೂಹಿಕ ತೀರ್ಮಾನವನ್ನು ಪ್ರದರ್ಶಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯಬೇಕು ಎಂದು ಲೋಕಸಭಾ ವಿಪಕ್ಷ ನಾಯಕ ಹಾಗೂ ರಾಜ್ಯಸಭಾ ವಿಪಕ್ಷ ನಾಯಕರಿಬ್ಬರೂ ಮೇ 10ರಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಮನವಿ ಮಾಡಿದ್ದರು. ಆದರೆ, ಈ ಸಲಹೆಯನ್ನು ಪ್ರಧಾನಿ ಒಪ್ಪಿಕೊಳ್ಳಲಿಲ್ಲ" ಎಂದು ಅವರು ಆರೋಪಿಸಿದ್ದಾರೆ.
"ಆದರೀಗ ತುರ್ತು ಪರಿಸ್ಥಿತಿಯ 50ನೇ ವರ್ಷದ ಅಂಗವಾಗಿ ಜೂನ್ 25-26ರಂದು ಸಂಸತ್ತಿನ ವಿಶೇಷ ಅಧಿವೇಶನ ಆಯೋಜನೆಯನ್ನು ಪರಿಗಣಿಸುವಂತೆ ಕಾಣುತ್ತಿದೆ" ಎಂದೂ ಅವರು ಆಪಾದಿಸಿದ್ದಾರೆ.
"ಕಳೆದ 11 ವರ್ಷಗಳಿಂದ ದೇಶವನ್ನು ಅಘೋಷಿತ ತುರ್ತು ಪರಿಸ್ಥಿತಿಯಲ್ಲಿರಿಸಿರುವ, ಪಹಲ್ಗಾಮ್ ಭಯೋತ್ಪಾದಕರೇಕೆ ಈಗಲೂ ನಾಪತ್ತೆಯಾಗಿದ್ದಾರೆ, ತಾನೇಕೆ ಕದನ ವಿರಾಮದ ಮಧ್ಯಸ್ಥಿಕೆ ವಹಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಅವಕಾಶ ನೀಡಿದೆ ಹಾಗೂ ಜೂನ್ 19, 2020ರಂದು ತಾನೇಕೆ ಚೀನಾಗೆ ಕ್ಲೀನ್ ಚಿಟ್ ನೀಡಿದೆ ಎಂದು ಇದುವರೆಗೂ ಉತ್ತರಿಸದ ಪ್ರಧಾನಿ ನರೇಂದ್ರ ಮೋದಿಯು ನೈಜ ಸಂಗತಿಗಳಿಂದ ವಿಷಯಾಂತರ ಮಾಡುತ್ತಿರುವುದಕ್ಕೆ ಹಾಗೂ ಜನರ ಗಮನ ಬೇರೆಡೆ ಸೆಳೆಯುತ್ತಿರುವುದಕ್ಕೆ ಇದು ಜ್ವಲಂತ ನಿದರ್ಶನವಾಗಿದೆ" ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.