ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ | ಜ್ಯೋತಿ ರಾಣಿ ಪೊಲೀಸ್ ಕಸ್ಟಡಿ ನಾಲ್ಕು ದಿನಗಳಿಗೆ ವಿಸ್ತರಣೆ
Photo: NDTV
ಗುರುಗ್ರಾಮ: ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಬಂಧಿತಳಾದ ಯೂಟ್ಯೂಬರ್ ಜ್ಯೋತಿರಾಣಿಯ ಪೊಲೀಸ್ ಕಸ್ಟಡಿಯನ್ನು ಸ್ಥಳೀಯ ನ್ಯಾಯಾಲಯ ನಾಲ್ಕು ದಿನಗಳಿಗೆ ವಿಸ್ತರಿಸಿದೆ.
ಭಾರತೀಯ ಸೇನೆ ಹಾಗೂ ರಕ್ಷಣಾ ವಿಷಯಗಳಿಗೆ ಸಂಬಂಧಿಸಿದ ಯಾವುದೇ ರಹಸ್ಯ ಮಾಹಿತಿಯನ್ನು ಪಡೆಯಲು ಸಾಧ್ಯವಾಗಿರಲಿಲ್ಲವೆಂದು ಹರ್ಯಾಣದ ಹಿಸಾರ್ ಜಿಲ್ಲೆಯ ಪೊಲೀಸ್ ಆಧೀಕ್ಷಕ ಶಶಾಂಕ್ ಕುಮಾರ್ ಸಾವನ್ ತಿಳಿಸಿದ್ದಾರೆ. ಆದರೆ ಪಾಕಿಸ್ತಾನದ ಗುಪ್ತಚರ ಏಜೆಂಟರುಗಳ ಜೊತೆ ಜ್ಯೋತಿರಾಣಿ ಯಾವೆಲ್ಲಾ ಮಾಹಿತಿಗಳನ್ನು ಹಂಚಿಕೊಂಡಿದ್ದಾಳೆಂಬುದನ್ನು ದೃಢಪಡಿಸಲು ಆಕೆಯ ಮೊಬೈಲ್ ಫೋನ್ ಹಾಗೂ ಲ್ಯಾಪ್‌ಟಾಪ್ ನ ವಿಧಿವಿಧಾನ ಪ್ರಯೋಗಾಲಯದ ಪರೀಕ್ಷಾ (ಎಫ್‌ಎಸ್‌ಎಲ್) ವರದಿಗಾಗಿ ಕಾಯಲಾಗುತ್ತಿದೆಯೆಂದು ಅವರು ಹೇಳಿದ್ದಾರೆ.
ಜ್ಯೋತಿರಾಣಿ ಯಾವುದೇ ಭಯೋತ್ಪಾದಕ ಗುಂಪಿನ ಜೊತೆ ಸಂಪರ್ಕದಲ್ಲಿದ್ದಳೆಂಬುದನ್ನು ಸೂಚಿಸುವ ಯಾವುದೇ ನೇರ ಪುರಾವೆ ದೊರೆತಿಲ್ಲವೆಂದು ಹಿಸಾರ್ ಪೊಲೀಸರು ಗುರುವಾರ ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಕೆಲವು ಕೇಂದ್ರೀಯ ತನಿಖಾ ಏಜೆನ್ಸಿಗಳು ಕೂಡಾ ಆಕೆಯನ್ನು ಪ್ರಶ್ನಿಸುತ್ತಿವೆ ಎಂದವರು ಹೇಳಿದ್ದಾರೆ. ತನಿಖೆಯ ವೇಳೆ ಆಕೆ ಬಹಿರಂಗಪಡಿಸಿರುವ ವಿಷಯಗಳ ಕುರಿತು ಮಾಧ್ಯಮಗಳಲ್ಲಿ ಹಲವಾರು ವದಂತಿಗಳು ಹರಿದಾಡುತ್ತಿರುವುದನ್ನು ಅವರು ತಿರಸ್ಕರಿಸಿದರು.