ತಮಿಳುನಾಡಿನ 35 ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ
Update: 2025-11-03 12:58 IST
ಕೊಲೊಂಬೊ : ಅಂತಾರಾಷ್ಟ್ರೀಯ ಸಮುದ್ರ ಗಡಿ ರೇಖೆ ದಾಟಿದ ಹಾಗೂ ಶ್ರೀಲಂಕಾ ಸಮುದ್ರ ವ್ಯಾಪ್ತಿಯಲ್ಲಿ ಮೀನುಗಾರಿಕೆ ನಡೆಸಿದ ಆರೋಪದಲ್ಲಿ ತಮಿಳುನಾಡಿನ 35 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಸೋಮವಾರ ಬಂಧಿಸಿದೆ.
ಮೂಲಗಳ ಪ್ರಕಾರ, ಮೂರು ಯಾಂತ್ರಿಕ ದೋಣಿಗಳಲ್ಲಿ ಈ ಮೀನುಗಾರರು ತೆರಳಿದ್ದು, ಎರಡು ದೋಣಿಗಳಲ್ಲಿ ತಲಾ 10 ಮಂದಿಯಿದ್ದರೆ, ಇನ್ನೊಂದು ದೋಣಿಯಲ್ಲಿ 11 ಮಂದಿ ಇದ್ದರು ಎನ್ನಲಾಗಿದೆ. ಈ ಎಲ್ಲರೂ ತಮಿಳುನಾಡಿನ ನಾಗಪಟ್ಟಿಣಂ ಜಿಲ್ಲೆಯವರು ಎಂದು ಹೇಳಲಾಗಿದೆ. ಉಳಿದ ನಾಲ್ಕು ಮಂದಿ ಮೀನುಗಾರರು ರಾಮನಾಥಪುರಂ ಜಿಲ್ಲೆಗೆ ಸೇರಿದವರಾಗಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ದೋಣಿಗಳು ಹಾಗೂ ಮೀನುಗಾರಿಕೆಯ ಬಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮೀನುಗಾರರನ್ನು ವಶಕ್ಕೆ ಪಡೆದು, ಕಂಕೆಸಂತುರೈ ಬಂದರಿಗೆ ಕರೆದೊಯ್ಯಲಾಗಿದೆ ಎನ್ನಲಾಗಿದೆ. ಸಮುದ್ರ ತೀರದ ಬಳಿಗೆ ತಲುಪಿದ ಬಳಿಕ ಅವರನ್ನು ಸ್ಥಳೀಯ ನ್ಯಾಯಾಲಯವೊಂದರ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.