ಎನ್‌ಇಪಿ, ತ್ರಿಭಾಷಾ ನೀತಿ ತಿರಸ್ಕರಿಸಿದ್ದಕ್ಕಾಗಿ ಕೇಂದ್ರದಿಂದ ತಮಿಳು ನಾಡು ವಿರುದ್ಧ ಬ್ಲ್ಯಾಕ್ ಮೇಲ್: ಸ್ಟಾಲಿನ್ ಆರೋಪ
ಎಂ.ಕೆ.ಸ್ಟಾಲಿನ್ | PTI
ಚೆನ್ನೈ: 2020ರ ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ತ್ರಿಭಾಷಾ ನೀತಿಯನ್ನು ತಮಿಳುನಾಡು ತಿರಸ್ಕರಿಸಿದ ಬಳಿಕ, ಕೇಂದ್ರ ಸರಕಾರವು ಬಹಿರಂಗವಾಗಿ ಬ್ಲ್ಯಾಕ್ ಮೇಲ್‌ನಲ್ಲಿ ತೊಡಗಿದೆ ಹಾಗೂ ರಾಜ್ಯಕ್ಕಾಗಿ ಮೀಸಲಾಗಿದ್ದ 2,152 ಕೋಟಿ ರೂ.ಗಳನ್ನು ಕಸಿದುಕೊಂಡು, ಅದನ್ನು ಇತರ ರಾಜ್ಯಗಳಿಗೆ ನೀಡಿದೆ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ರವಿವಾರ ಆಪಾದಿಸಿದ್ದಾರೆ.
ಕೇಂದ್ರದ ಬಿಜೆಪಿ ಸರಕಾರವು ತಮಿಳುನಾಡಿನ ವಿರುದ್ಧ ಪ್ರದರ್ಶಿಸುತ್ತಿರುವ ಅನ್ಯಾಯದ ವರ್ತನೆಗೆ ಮಿತಿಯೇ ಇಲ್ಲ. ರಾಷ್ಟ್ರೀಯ ಶಿಕ್ಷಣ ನೀತಿ 2020 ಹಾಗೂ ತ್ರಿಭಾಷಾ ನೀತಿಯನ್ನು ತಿರಸ್ಕರಿಸಿದ್ದಕ್ಕಾಗಿ ಅದು ಬಹಿರಂಗವಾಗಿ ಬ್ಲ್ಯಾಕ್ ಮೇಲ್‌ನಲ್ಲಿ ತೊಡಗಿದೆ. ತಮಿಳುನಾಡು ವಿದ್ಯಾರ್ಥಿಗಳಿಗೆ ಮೀಸಲಾಗಿದ್ದ 2152 ಕೋಟಿ ರೂ.ಗಳನ್ನು ಕಿತ್ತುಕೊಂಡಿದೆ ಹಾಗೂ ಈಗ ಅದನ್ನು ಇತರ ರಾಜ್ಯಗಳಿಗೆ ಹಸ್ತಾಂತರಿಸಿದೆ. ತಮ್ಮ ಹಕ್ಕುಗಳ ರಕ್ಷಣೆಗೆ ಮುಂದಾದ ವಿದ್ಯಾರ್ಥಿಗಳ ಮೇಲೆ ನಡೆದ ದಬ್ಬಾಳಿಕೆಯಲ್ಲದೆ ಮತ್ತೇನೂ ಅಲ್ಲ ’’ ಎಂದು ಸ್ಟಾಲಿನ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದ ಪೋಸ್ಟ್‌ನಲ್ಲಿ ಆಪಾದಿಸಿದ್ದಾರೆ.
ರಾಜ್ಯದ ವಿರುದ್ಧ ರಾಜಕೀಯ ಸೇಡು ತೀರಿಸಲು ವಿದ್ಯಾರ್ಥಿಗಳಿಗೆ ಶಿಕ್ಷಣದ ಲಭ್ಯತೆಯನ್ನು ಹೊಸಕಿಹಾಕುವಂತಹ ಕ್ರೌರ್ಯವನ್ನು ಸರಕಾರವು ಪ್ರದರ್ಶಿಸಿರುವುದು ಭಾರತದ ಇತಿಹಾಸದಲ್ಲಿಲ್ಲ. ಆದರೆ ಬಿಜೆಪಿಯು ಅದು ಅನ್ಯಾಯದ ಪ್ರತಿರೂಪವೆಂಬುದನ್ನು ಹಾಗೂ ತಮಿಳುನಾಡು ಮತ್ತು ಅದರ ಜನತೆಯ ಬಗ್ಗೆ ದ್ವೇಷಭಾವನೆ ಹೊಂದಿದೆ ಎಂಬುದನ್ನು ಸಾಬೀತುಪಡಿಸಿದೆ ಎಂದು ಸ್ಟಾಲಿನ್ ‘ಎಕ್ಸ್’ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.