ಶೇರು ಮಾರುಕಟ್ಟೆಯಲ್ಲಿ 'ರಕ್ತಪಾತ' : 10 ಲಕ್ಷ ಕೋಟಿ ರೂ. ನಷ್ಟ!
ಸಾಂದರ್ಭಿಕ ಚಿತ್ರ | Photo Credit : freepik
ಮುಂಬೈ, ಜ. 20: ಭಾರತೀಯ ಶೇರು ಮಾರುಕಟ್ಟೆ ಮಂಗಳವಾರ ತನ್ನ ಕುಸಿತವನ್ನು ಮುಂದುವರಿಸಿದ್ದು, ಹೂಡಿಕೆದಾರರು ಎರಡು ದಿನಗಳಲ್ಲಿ ಸುಮಾರು 10 ಲಕ್ಷ ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.
ಎಸ್ ಆ್ಯಂಡ್ ಪಿ ಬಾಂಬೆ ಶೇರು ವಿನಿಮಯ (ಬಿಎಸ್‌ಇ) ಸೂಚ್ಯಂಕವು ಎರಡು ದಿನಗಳಲ್ಲಿ 1,000ಕ್ಕಿಂತಲೂ ಹೆಚ್ಚಿನ ಅಂಕಗಳ ಕುಸಿತ ಕಂಡಿದೆ. ಅದೇ ವೇಳೆ, ರಾಷ್ಟ್ರೀಯ ಶೇರು ವಿನಿಮಯದ ನಿಫ್ಟಿ 50 ಸೂಚ್ಯಂಕವು ಒಂದು ಶೇಕಡಕ್ಕಿಂತಲೂ ಹೆಚ್ಚು ಕುಸಿದಿದೆ. ಜಾಗತಿಕ-ರಾಜಕೀಯ ಉದ್ವಿಗ್ನತೆಗಳು, ವಿದೇಶಿ ಹೂಡಿಕೆಗಳ ನಿರಂತರ ಹೊರಹರಿವು ಹಾಗೂ ಬಜೆಟ್‌ಪೂರ್ವ ಆತಂಕಗಳು ಭಾರೀ ಪ್ರಮಾಣದಲ್ಲಿ ಶೇರುಗಳ ಮಾರಾಟಕ್ಕೆ ಕಾರಣವಾಗಿವೆ.
ಯುರೋಪ್ ನ ಎಂಟು ದೇಶಗಳ ಮೇಲೆ ಸುಂಕ ಹೇರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಬಳಿಕ ಜಾಗತಿಕ ಮಟ್ಟದಲ್ಲಿ ಶೇರು ಹೂಡಿಕೆದಾರರು ಕಳವಳಗೊಂಡಿದ್ದು, ಶೇರುಗಳನ್ನು ಭಾರೀ ಪ್ರಮಾಣದಲ್ಲಿ ಮಾರಾಟ ಮಾಡಲು ಆರಂಭಿಸಿದ್ದಾರೆ. ಗ್ರೀನ್‌ಲ್ಯಾಂಡ್ ನ್ನು ವಶಪಡಿಸಿಕೊಳ್ಳುವ ತನ್ನ ಯೋಜನೆಗೆ ಈ ದೇಶಗಳು ವಿರೋಧ ವ್ಯಕ್ತಪಡಿಸಿರುವುದಕ್ಕಾಗಿ ಟ್ರಂಪ್ ಅವುಗಳ ಮೇಲೆ ಸುಂಕದ ಬೆದರಿಕೆ ಹಾಕಿದ್ದಾರೆ. ಇದು ಅಟ್ಲಾಂಟಿಕ್ ಸಾಗರದ ಆಚೀಚಿನ ದೇಶಗಳ ನಡುವೆ ವ್ಯಾಪಾರ ಯುದ್ಧಕ್ಕೆ ಕಾರಣವಾಗಬಹುದು ಎಂಬ ಭೀತಿ ಎಲ್ಲೆಡೆ ಹರಡಿದೆ.
ಫೆಬ್ರವರಿ 1ರಿಂದ ಯುರೋಪ್ ದೇಶಗಳ ವಸ್ತುಗಳ ಮೇಲೆ 10 ಶೇಕಡಾ ಸುಂಕ ವಿಧಿಸುವುದಾಗಿ ಟ್ರಂಪ್ ಹೇಳಿದ್ದಾರೆ. ಬಳಿಕ, ಜೂನ್ 1ರಿಂದ ಇದನ್ನು 25 ಶೇಕಡಕ್ಕೆ ಹೆಚ್ಚಿಸಲಾಗುವುದು ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಅಮೆರಿಕದ ವಸ್ತುಗಳ ಮೇಲೂ ಸುಂಕ ವಿಧಿಸಲು ಯುರೋಪ್ ದೇಶಗಳು ಸಿದ್ಧತೆ ನಡೆಸುತ್ತಿವೆ ಎನ್ನಲಾಗಿದೆ.
‘‘ಅಮೆರಿಕ-ಯುರೋಪ್ ಬಿಕ್ಕಟ್ಟಿಗೆ ಸಂಬಂಧಿಸಿ ಸ್ಪಷ್ಟತೆ ಸಿಗುವವರೆಗೆ ಅನಿಶ್ಚಿತತೆ ಮುಂದುವರಿಯುವ ಸಾಧ್ಯತೆಯಿದೆ’’ ಎಂದು ಜಿಯೋಜಿತ್ ಇನ್ವೆಸ್ಟ್‌ಮೆಂಟ್ಸ್ ನ ಮುಖ್ಯ ಹೂಡಿಕೆ ತಂತ್ರಗಾರ ವಿ.ಕೆ. ವಿಜಯಕುಮಾರ್ ಹೇಳಿದ್ದಾರೆ.