ಹಿಂಡನ್ ಬರ್ಗ್ ವಿರುದ್ಧ ಕಠಿಣ ಕ್ರಮ : ಕೇಂದ್ರ ಸಚಿವ ಗಿರಿರಾಜ್ ಸಿಂಗ್
ಕೇಂದ್ರ ಸಚಿವ ಗಿರಿರಾಜ್ ಸಿಂಗ್ | PC : PTI
ಹೊಸದಿಲ್ಲಿ : ಹಿಂಡನ್ ಬರ್ಗ್ ರಿಸರ್ಚ್ ಕಾಂಗ್ರೆಸ್ನೊಂದಿಗೆ ಸೇರಿಕೊಂಡು ದೇಶಕ್ಕೆ ಕೆಟ್ಟ ಹೆಸರು ತಂದಿದೆ. ಹಿಂಡನ್ಬರ್ಗ್ ರಿಸರ್ಚ್ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಸೋಮವಾರ ಹೇಳಿದ್ದಾರೆ.
ಇಲ್ಲಿ ಸೋಮವಾರ ನಡೆದ ‘ಹ್ಯಾಂಡ್ ಲೂಮ್ ಎಕ್ಸ್ ಪೊ’ದ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಗ್, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಜೈರಾಮ್ ರಮೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಇದು ದೇಶಕ್ಕೆ ಕೆಟ್ಟ ಹೆಸರು ತಂದ ತಂಡ. ಇದರಲ್ಲಿ ರಾಹುಲ್ ಗಾಂಧಿ ಹಾಗೂ ಜೈರಾಮ್ ರಮೇಶ್ ಇದ್ದಾರೆ. ಹಿಂಡನ್ ಬರ್ಗ್ ನಮಗೆ ಕೆಟ್ಟ ಹೆಸರು ತಂದಿದೆ. ದೇಶಕ್ಕಾದ ಈ ಅವಮಾನವನ್ನು ನಾವು ಸಹಿಸಲಾರೆವು. ಈ ಜನರು ದೇಶದ ಶತ್ರುಗಳು. ಈಗ ನಾವು ಹಿಂಡನ್ ಬರ್ಗ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಅವರು ಹೇಳಿದರು.
ರಾಹುಲ್ ಗಾಂಧಿ ಅವರನ್ನು ‘‘ಶ್ರೀಮಂತನ ಮಗ’’ ಎಂದು ಕರೆದ ಅವರು, ರಾಹುಲ್ ಗಾಂಧಿ ಅವರಿಗೆ ರಾಜ್ಯ ಹಾಗೂ ದೇಶದ ನಿರ್ದೇಶನದ ಕುರಿತು ಯಾವುದೇ ತಿಳುವಳಿಕೆ ಇಲ್ಲ ಎಂದರು. ಅಲ್ಲದೆ, ಗೊಂದಲ ಹಾಗೂ ಭೀತಿ ಹುಟ್ಟಿಸಲು ಪ್ರಯತ್ನಿಸುವ ಇಂತಹ ಜನರ ಬಗ್ಗೆ ಜನರು ಎಚ್ಚರವಾಗಿರಬೇಕು ಎಂದು ಹೇಳಿದರು.
ಹಿಂಡನ್ ಬರ್ಗ್ ಆರೋಪದ ಕುರಿತಂತೆ ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸಬೇಕೆಂಬ ಕಾಂಗ್ರೆಸ್ ಆಗ್ರಹದ ಕುರಿತು ಪ್ರಶ್ನಿಸಿದಾಗ ಸಿಂಗ್, ಈ ಕಾಂಗ್ರೆಸ್ ಹಿಂಡನ್ ಬರ್ಗ್ನ ಹಿಂದಿದೆ. ಹಿಂಡನ್ ಬರ್ಗ್ ಭಾರತವನ್ನು ನಾಶ ಮಾಡುವ ಟೂಲ್ ಕಿಟ್. ರಾಹುಲ್ ಗಾಂಧಿ ಅವರಂತವರು ಇದರಲ್ಲಿ ಭಾಗಿಯಾಗಿದ್ದಾರೆ ಎಂದರು.
ರಾಹುಲ್ ಗಾಂಧಿ ವಿದೇಶಕ್ಕೆ ಹೋದಾಗಲೂ ದೇಶಕ್ಕೆ ಕಳಂಕ ತರುತ್ತಿದ್ದಾರೆ. ಮನೆಯಲ್ಲಿದ್ದಾಗ ಅವರು ದೇಶದ ಜನರಲ್ಲಿ ಗೊಂದಲ ಹಾಗೂ ಭೀತಿ ಹುಟ್ಟಿಸುತ್ತಿದ್ದಾರೆ. ಜನರು ಇಂತಹ ಜನರ ಬಗ್ಗೆ ಎಚ್ಚರವಾಗಿರಬೇಕು. ಗೊಂದಲ ಸೃಷ್ಟಿಸುವುದು ದೇಶ ವಿರೋಧಿಗಳು ಮಾಡುವ ಕೆಲಸ. ಇದು ಸೂಕ್ತವಲ್ಲ. ಯಾವುದೇ ದೇಶಪ್ರೇಮಿ ಕೂಡ ಇಂತಹ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಗಿರಿರಾಜ್ ಸಿಂಗ್ ಹೇಳಿದರು.