×
Ad

ನೀಟ್ ಪ್ರಶ್ನೆಪತ್ರಿಕೆಯಲ್ಲಿ ತಪ್ಪು: ವಿದ್ಯಾರ್ಥಿಗಳಿಂದ ಕಳವಳ

Update: 2025-06-11 08:18 IST

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ದೇಶಾದ್ಯಂತ ವೈದ್ಯಕೀಯ ಕೋರ್ಸ್‍ಗಳ ಪ್ರವೇಶಕ್ಕಾಗಿ ಮೇ 4 ರಂದು ನಡೆದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್-ಯುಜಿ 2025) ಶಿಕ್ಷಣ ಸಚಿವಾಲಯ ವ್ಯವಸ್ಥೆಗೊಳಿಸಿದ್ದ ಬಿಗಿ ಭದ್ರತೆ ಮತ್ತು ರಾಜ್ಯ ಅಧಿಕಾರಿಗಳ ಸಮನ್ವಯದಿಂದಾಗಿ ವ್ಯವಸ್ಥಿತವಾಗಿ ನಡೆದಿದ್ದರೂ, ಪ್ರಶ್ನೆಪತ್ರಿಕೆಗಳಲ್ಲಿ ಇದ್ದ ತಪ್ಪುಗಳು ಮತ್ತು ಅಹವಾಲು ಇತ್ಯರ್ಥಪಡಿಸುವಲ್ಲಿನ ವಿಳಂಬದ ಬಗ್ಗೆ ವಿದ್ಯಾರ್ಥಿಗಳು/ ಪೋಷಕರು ಭಾರಿ ಕಳವಳ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‍ಟಿಎ) ತ್ವರಿತವಾಗಿ ಸ್ಪಂದಿಸುವಂತೆ ಆಗ್ರಹಿಸಿದ್ದಾರೆ.

ಈ ತಿಂಗಳ ಕೊನೆಗೆ ನೀಟ್-ಯುಜಿ ಫಲಿತಾಂಶ ನಿರೀಕ್ಷಿಸಲಾಗಿದ್ದು, ಎಂಬಿಬಿಎಸ್, ಬಿಡಿಎಸ್ ಮತ್ತು ಇತರ ವೈದ್ಯಕೀಯ ಪದವಿ ಕೋರ್ಸ್‍ಗಳನ್ನು ಸೇರಲು ಪ್ರವೇಶದ್ವಾರವಾಗಿರುವ ಈ ಪರೀಕ್ಷೆಯ ಫಲಿತಾಂಶಕ್ಕಾಗಿ 20 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಗುಜರಾತ್‍ನ ಸಿಕಾರ್ ನಲ್ಲಿ ವಿದ್ಯಾರ್ಥಿಗಳಿಗೆ ತಪ್ಪುಗಳನ್ನು ಹೊಂದಿದ್ದ ಪ್ರಶ್ನೆಪತ್ರಿಕೆ ಮತ್ತು ಬೇಕಾಬಿಟ್ಟಿಯಾಗಿ ಪುಟ ಸಂಖ್ಯೆ ನಮೂದಿಸಿದ ಕಿರುಹೊತ್ತಗೆಗಳು ಲಭ್ಯವಾಗಿದ್ದವು. ಉದಾಹರಣೆಗೆ ಸಿಕಾರ್ ನಲ್ಲಿ ಕೋಡ್ 47 ಹೊಂದಿದ್ದ ಪ್ರಶ್ನೆಪತ್ರಿಕೆ ವಿದ್ಯಾರ್ಥಿಗಳಿಗೆ ಲಭ್ಯವಾಗಿದ್ದು, ಇದರ ಪುಟಸಂಖ್ಯೆಗಳು ಅನುಕ್ರಮವಾಗಿರಲಿಲ್ಲ. ಜಾಮ್‍ ನಗರದಲ್ಲಿ ಪೇಪರ್ ಕೋಡ್ 48 ಹೊಂದಿದ್ದ ಪ್ರಶ್ನೆಪತ್ರಿಕೆಗಳನ್ನೂ ಇದೇ ಸಮಸ್ಯೆ ಇತ್ತು.

ಪ್ರಶ್ನೆ ಸಂಖ್ಯೆ 7ರ ಬಳಿಕ ಪ್ರಶ್ನೆ ಸಂಖ್ಯೆ 15 ಇತ್ತು. ಇದರಿಂದಾಗಿ ತಪ್ಪು ಪ್ರಶ್ನೆಗಳಿಗೆ ಉತ್ತರ ಪತ್ರಿಕೆಯಲ್ಲಿ ಟಿಕ್ ಮಾಡುವಂತಾಗಿತ್ತು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಉತ್ತರ ಪತ್ರಿಕೆಯಲ್ಲಿ ಅದಕ್ಕೆ ಸರಿಯಾದ ಉತ್ತರಗಳ ಸರ್ಕಲ್ ಹುಡುಕಲು ಅಮೂಲ್ಯ ಸಮಯ ವ್ಯರ್ಥವಾಗಿತ್ತು ಎನ್ನುವುದು ವಿದ್ಯಾರ್ಥಿಗಳ ಅಳಲು.

ಪರೀಕ್ಷೆ ಬಳಿಕ ಪೋಷಕರು, ದೋಷಯುಕ್ತ ಪ್ರಶ್ನೆಪತ್ರಿಕೆಗಳ ಪ್ರತಿಯನ್ನಿಟ್ಟು ಗುಜರಾತ್ ಸರ್ಕಾರ ಹಾಗೂ ಎನ್‍ಟಿಎಗೆ ಅಧಿಕೃತ ದೂರು ನೀಡಿದ್ದರು. ಪರೀಕ್ಷೆ ಸಂದರ್ಭದಲ್ಲೇ ವಿದ್ಯಾರ್ಥಿಗಳು ಇದನ್ನು ಗಮನಕ್ಕೆ ತಂದಾಗ, ಈ ಸಮಸ್ಯೆ ಬಗೆಹರಿಸುವ ಭರವಸೆ ನೀಡಲಾಗಿತ್ತು ಎಂದು ಪೋಷಕರು ವಿವರಿಸಿದ್ದರು. ಆದರೆ ಎನ್‍ಡಿಎ ಈ ಪ್ರಕರಣ ನ್ಯಾಯಾಲಯದಲ್ಲಿದೆ ಎಂಬ ಕಾರಣ ನೀಡಿ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ನಿರಾಕರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News