×
Ad

ಬೀಳ್ಕೊಡುಗೆ ಹೆಸರಲ್ಲಿ ವಾಹನಗಳಲ್ಲಿ ಸ್ಟಂಟ್: 35 ವಿದ್ಯಾರ್ಥಿಗಳ ವಿರುದ್ಧ ಕಾನೂನು ಕ್ರಮ

Update: 2025-02-11 07:45 IST

PC: x.com/IndiaToday

ಸೂರತ್: ಇಲ್ಲಿನ ಪ್ರತಿಷ್ಠಿತ ಶಾಲೆಯೊಂದರ 35 ಮಂದಿ 12ನೇ ತರಗತಿ ವಿದ್ಯಾರ್ಥಿಗಳು ಬೀಳ್ಕೊಡುಗೆ ಸಮಾರಂಭಕ್ಕೆ ದಂಡಿ ರಸ್ತೆಯಲ್ಲಿ ಐಷಾರಾಮಿ ಕಾರುಗಳಲ್ಲಿ ಸ್ಟಂಟ್ ಪ್ರದರ್ಶಿಸುತ್ತಾ, ಪಟಾಕಿಗಳನ್ನು ಸಿಡಿಸುತ್ತಾ ತೆರಳಿ ಸಂಚಾರ ನಿಯಮಗಳನ್ನು ಸಾರಾಸಗಟಾಗಿ ಉಲ್ಲಂಘಿಸಿದ ಬೆನ್ನಲ್ಲೇ ವಿದ್ಯಾರ್ಥಿಗಳು ಹಾಗೂ ಪೋಷಕರ ವಿರುದ್ಧ ಕಾನೂನು ಕ್ರಮ ಆರಂಭಿಸಲಾಗಿದೆ.

ಬಾಲಿವುಡ್ ಫ್ಲಿಕ್ 'ಅನಿಮಲ್'ನ ಹಾಡಿಗೆ ನೃತ್ಯ ಮಾಡುತ್ತಾ ಸಾಗುವ ದೃಶ್ಯವನ್ನು ಸೆರೆಹಿಡಿಯಲಾದ ರೀಲ್ಸ್ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸೋಮವಾರ ಪೊಲೀಸರು ಈ ವಿದ್ಯಾರ್ಥಿಗಳ ವಿರುದ್ಧ ಮತ್ತು ಪೋಷಕರ ವಿರುದ್ಧ ಕ್ರಮ ಆರಂಭಿಸಿದ್ದಾರೆ. 26 ಕಾರುಗಳ ಪೈಕಿ 12 ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.

ಐಷಾರಾಮಿ ಪೋಷಾಕುಗಳನ್ನು ಧರಿಸಿ, ವಿಲಾಸಿ ಕಾರುಗಳಲ್ಲಿ ಬೀಳ್ಕೊಡುಗೆ ಸಮಾರಂಭಕ್ಕೆ ತೆರಳುವ ಮೂಲಕ ಸಂಸ್ಥೆಯಲ್ಲಿ ತಮ್ಮ ಕೊನೆಯ ದಿನವನ್ನು ಕಳೆಯಲು ವಿದ್ಯಾರ್ಥಿಗಳು ತೆರಳುತ್ತಿದ್ದರು. ಡ್ರೋಣ್ ಮತ್ತು ಕ್ಯಾಮೆರಾಗಳನ್ನು ಬಳಸಿ ಇದರ ವಿಡಿಯೊ ಚಿತ್ರೀಕರಿಸಿದ್ದರು. ವಿಡಿಯೊ ವಿರುದ್ಧ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಅಪಾಯಕಾರಿ ಸ್ಟಂಟ್ ಗಳನ್ನು ರಸ್ತೆಯಲ್ಲಿ ಪ್ರದರ್ಶಿಸಿದರೂ, ಕ್ರಮ ಕೈಗೊಳ್ಳದ ಪೊಲೀಸರ ಕ್ರಮವನ್ನು ನಾಗರಿಕರು ಪ್ರಶ್ನಿಸಿದ್ದರು.

ಈ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ದೃಶ್ಯಾವಳಿಗಳನ್ನು ವೀಕ್ಷಿಸಿದಾಗ ನಿಯಮಗಳ ಉಲ್ಲಂಘನೆ ಕಂಡುಬಂದಿದೆ. ಇದಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಡಿಸಿಪಿ ಅಮಿತಾ ವನಾನಿ ಹೇಳಿದ್ದಾರೆ. ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳು ಹಾಗೂ ಪೋಷಕರ ವಿವರಗಳನ್ನು ಪೊಲೀಸರು ಪಡೆದಿದ್ದಾರೆ. ಇಂಥ ಚಟುವಟಿಕೆಗಳನ್ನು ಸಂಸ್ಥೆ ಒಪ್ಪುವುದಿಲ್ಲ ಎಂದು ಸಂಸ್ಥೆಯ ಸಂಸ್ಥಾಪಕ ವರ್ದನ್ ಕಾಬ್ರಾ ಹೇಳಿದ್ದಾರೆ.

Full View


ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್‌ ಮಾಡಿ ►https://whatsapp.com/channel/0029VaA8ju86LwHn9OQpEq28


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News