×
Ad

ಕೋಟದಲ್ಲಿ ಇನ್ನೋರ್ವ ನೀಟ್ ಆಕಾಂಕ್ಷಿ ವಿದ್ಯಾರ್ಥಿ ಆತ್ಮಹತ್ಯೆ

Update: 2025-02-11 20:10 IST

ಕೋಟ: ವೈದ್ಯಕೀಯ ಕೋರ್ಸೊಂದಕ್ಕೆ ಪ್ರವೇಶ ಪಡೆಯುವುದಕ್ಕಾಗಿ ರಾಷ್ಟ್ರೀಯ ಪ್ರವೇಶ ಅರ್ಹತಾ ಪರೀಕ್ಷೆ (ನೀಟ್)ಗೆ ಸಿದ್ಧತೆ ನಡೆಸುತ್ತಿದ್ದ 18 ವರ್ಷದ ವಿದ್ಯಾರ್ಥಿಯೊಬ್ಬರು ಮಂಗಳವಾರ ರಾಜಸ್ಥಾನದ ಕೋಚಿಂಗ್ ಕೇಂದ್ರ ಕೋಟದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಜಸ್ಥಾನದ ಸವಾಯಿ ಮಾದೋಪುರದ ನಿವಾಸಿಯಾಗಿರುವ ವಿದ್ಯಾರ್ಥಿ ಎರಡು ವರ್ಷಗಳ ಹಿಂದೆ ಕೋಟಕ್ಕೆ ಬಂದಿದ್ದರು ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಮಂಗಿಲಾಲ್ ಯಾದವ್ ತಿಳಿಸಿದ್ದಾರೆ.

‘‘ಅವರು ಪ್ರತಿಷ್ಠಿತ ಕೋಚಿಂಗ್ ಸಂಸ್ಥೆಯೊಂದರಲ್ಲಿ ನೀಟ್‌ ಗಾಗಿ ಸಿದ್ಧತೆ ನಡೆಸುತ್ತಿದ್ದರು. ಪೇಯಿಂಗ್ ಗೆಸ್ಟ್ ಆಗಿ ಅವರು ಉಳಿದುಕೊಂಡಿದ್ದರು. ಅವರು ತನ್ನ ಕೋಣೆಯ ಸೀಲಿಂಗ್ ಫ್ಯಾನ್‌ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’’ ಎಂದು ಅವರು ಹೇಳಿದರು.

ಬಾಗಿಲು ತೆರೆಯುವಂತೆ ಪಿಜಿ ಮಾಲೀಕರು ಹಲವು ಬಾರಿ ಕೂಗಿದಾಗಲೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಬಳಿಕ, ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ವಿದ್ಯಾರ್ಥಿಯ ಶವ ಫ್ಯಾನ್‌ನಿಂದ ನೇತಾಡುತ್ತಿತ್ತು ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

ತನ್ನ ಸ್ನೇಹಿತನೊಬ್ಬನೊಂದಿಗೆ ನಡೆಸಿದ ವಾಟ್ಸ್‌ ಆ್ಯಪ್ ಸಂಭಾಷಣೆಯಲ್ಲಿ, ಕಲಿಯುವಿಕೆಗೆ ಸಂಬಂಧಿಸಿದ ಒತ್ತಡದ ಬಗ್ಗೆ ವಿದ್ಯಾರ್ಥಿಯು ಹೇಳಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಈ ವರ್ಷ ಕೋಟದಲ್ಲಿ ಆರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಈ ಸಂಖ್ಯೆ 20 ಆಗಿತ್ತು. 2023ರಲ್ಲಿ ಅದು 27ಕ್ಕೆ ಏರಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News