×
Ad

ಸಿಜೆ ಐ ನೇತೃತ್ವದ ಸುಪ್ರೀಂ ಪೀಠದಿಂದ ಇವಿಎಮ್‌ಗಳ ಪರಿಶೀಲನೆ ಕೋರಿರುವ ಅರ್ಜಿಗಳ ವಿಚಾರಣೆ

Update: 2025-01-24 20:30 IST

ಸುಪ್ರೀಂ | PC : PTI 

ಹೊಸದಿಲ್ಲಿ: ವಿದ್ಯುನ್ಮಾನ ಮತದಾನ ಯಂತ್ರ(ಇವಿಎಂ)ಗಳ ಪರಿಶೀಲನೆಗೆ ನೀತಿಯೊಂದನ್ನು ಕೋರಿ ಹರ್ಯಾಣದ ಮಾಜಿ ಸಚಿವ ಹಾಗೂ ಐದು ಬಾರಿಯ ಶಾಸಕ ಕರಣಸಿಂಗ್ ದಲಾಲ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಸರ್ವೋಚ್ಚ ನ್ಯಾಯಾಲಯದ ಪೀಠವು ನಡೆಸಲಿದೆ.

ವಿಷಯವು ಶುಕ್ರವಾರ ವಿಚಾರಣೆಗಾಗಿ ನ್ಯಾಯಮೂರ್ತಿಗಳಾದ ದೀಪಂಕರ ದತ್ತಾ ಮತ್ತು ಮನಮೋಹನ್ ಅವರ ಪೀಠದ ಮುಂದೆ ಬಂದಿದ್ದು,ಈ ಪ್ರಕರಣವನ್ನು ಇಂತಹುದೇ ಅರ್ಜಿಗಳೊಂದಿಗೆ ಮುಖ್ಯ ನ್ಯಾಯಾಧೀಶರ ಮುಂದಿರಿಸಲಾಗುವುದು ಎಂದು ಪೀಠವು ತಿಳಿಸಿತು.

ಇವಿಎಮ್‌ಗಳ ಪರಿಶೀಲನೆಗಾಗಿ ನೀತಿಯೊಂದನ್ನು ಕೋರಿರುವ ದಲಾಲ್, ಈ ಹಿಂದೆ ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ವಿರುದ್ಧ ಭಾರತ ಸರಕಾರ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ನೀಡಿದ್ದ ತೀರ್ಪಿನ ಅನುಸರಣೆಯನ್ನೂ ಕೋರಿಕೊಂಡಿದ್ದಾರೆ.

ದಲಾಲ್ ಮತ್ತು ಸಹ-ಅರ್ಜಿದಾರ ಲಖನ ಕುಮಾರ ಸಿಂಗ್ ಅವರು ತಮ್ಮ ಕ್ಷೇತ್ರಗಳಲ್ಲಿ ಎರಡನೇ ಅತಿ ಹೆಚ್ಚು ಮತಗಳನ್ನು ಗಳಿಸಿದ್ದು,ಇವಿಎಮ್‌ನ ನಾಲ್ಕು ಘಟಕಗಳಾದ ಕಂಟ್ರೋಲ್ ಯೂನಿಟ್, ಬ್ಯಾಲಟ್ ಯೂನಿಟ್,ವಿವಿಪ್ಯಾಟ್ ಮತ್ತು ಸಿಂಬಲ್ ಲೋಡಿಂಗ್ ಯೂನಿಟ್‌ಗಳ ಮೂಲ ‘ಬರ್ನ್ಟ್ ಮೆಮರಿ’ ಅಥವಾ ಮೈಕ್ರೋಕಂಟ್ರೋಲರ್‌ನ್ನು ಪರಿಶೀಲಿಸಲು ಶಿಷ್ಟಾಚಾರವನ್ನು ಜಾರಿಗೊಳಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನವನ್ನು ಕೋರಿದ್ದಾರೆ.

ಚುನಾವಣಾ ಫಲಿತಾಂಶಗಳು ಪ್ರಕಟಗೊಂಡ ಬಳಿಕ ಪ್ರತಿ ಕ್ಷೇತ್ರದಲ್ಲಿಯ ಶೇ.5ರಷ್ಟು ಇವಿಎಮ್‌ಗಳನ್ನು ಅವುಗಳ ತಯಾರಕ ಸಂಸ್ಥೆಗಳ ಇಂಜಿನಿಯರ್‌ಗಳಿಂದ ಪರಿಶೀಲನೆಗೊಳಪಡಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ತನ್ನ ಹಿಂದಿನ ತೀರ್ಪಿನಲ್ಲಿ ಆದೇಶಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News