×
Ad

ಸುಪ್ರೀಂ ಕೋರ್ಟ್ ವಕೀಲರಿಗೆ ಈಡಿ ಸಮನ್ಸ್: ಮುಖ್ಯ ನ್ಯಾಯಾಧೀಶರ ಮಧ್ಯಪ್ರವೇಶಕ್ಕೆ ಮನವಿ

Update: 2025-06-20 21:09 IST

ಸುಪ್ರೀಂ ಕೋರ್ಟ್‌ | PC :PTI

ಹೊಸದಿಲ್ಲಿ: ವಿಚಾರಣೆಗೆ ಹಾಜರಾಗುವಂತೆ ಅನುಷ್ಠಾನ ನಿರ್ದೇಶನಾಲಯ (ಈಡಿ)ವು ಸುಪ್ರೀಂ ಕೋರ್ಟ್‌ನ ಇನ್ನೋರ್ವ ಹಿರಿಯ ವಕೀಲನಿಗೆ ನೋಟಿಸ್ ನೀಡಿರುವುದಕ್ಕೆ ಸುಪ್ರೀಂ ಕೋರ್ಟ್ ಆ್ಯಡ್ವಕೇಟ್ಸ್-ಆನ್-ರೆಕಾರ್ಡ್ ಅಸೋಸಿಯೇಶನ್ (ಎಸ್‌ಸಿಎಒಆರ್‌ಎ) ಶುಕ್ರವಾರ ಕಳವಳ ವ್ಯಕ್ತಪಡಿಸಿದೆ. ‘‘ಕಾನೂನು ವೃತ್ತಿಯ ಸ್ವಾತಂತ್ರ್ಯ ಮತ್ತು ವಕೀಲ-ಕಕ್ಷಿಗಾರ ಗೌಪ್ಯತೆಯ ಮೇಲಿನ ಗಂಭೀರ ಅತಿಕ್ರಮಣ’’ವನ್ನು ತಕ್ಷಣ ಸ್ವಯಂಪ್ರೇರಿತವಾಗಿ ಗಣನೆಗೆ ತೆಗೆದುಕೊಳ್ಳುವಂತೆ ಅದು ಭಾರತದ ಮುಖ್ಯ ನ್ಯಾಯಾಧೀಶ ಭೂಷಣ್ ಆರ್. ಗವಾಯಿಯನ್ನು ಒತ್ತಾಯಿಸಿದೆ.

ಈ ಬಾರಿ ಅನುಷ್ಠಾನ ನಿರ್ದೇಶನಾಲಯವು ಪ್ರತಾಪ್ ವೇಣುಗೋಪಾಲ್‌ ಗೆ ಸಮನ್ಸ್ ನೀಡಿದೆ.

ವೇಣುಗೋಪಾಲ್ ಹಿರಿಯ ವಕೀಲ ಅರವಿಂದ ದಾತಾರ್ ನೀಡಿರುವ ಕಾನೂನು ಅಭಿಪ್ರಾಯದ ಆ್ಯಡ್ವಕೇಟ್-ಆನ್-ರೆಕಾರ್ಡ್ ಆಗಿದ್ದರು. ರೆಲಿಗೇರ್ ಎಂಟರ್‌ಪ್ರೈಸಸ್‌ನ ಮಾಜಿ ಅಧ್ಯಕ್ಷೆ ರಶ್ಮಿ ಸಲೂಜರಿಗೆ ಎಂಪ್ಲಾಯೀ ಸ್ಟಾಕ್ ಆಪ್ಶನ್ ಪ್ಲ್ಯಾನ್ (ಇಎಸ್‌ಒಪಿ) ನೀಡುವ ಕೇರ್ ಹೆಲ್ತ್ ಇನ್ಶೂರೆನ್ಸ್‌ನ ಪ್ರಸ್ತಾವವನ್ನು ವಕೀಲ ಅರವಿಂದ ದಾತಾರ್‌ರ ಕಾನೂನು ಅಭಿಪ್ರಾಯವು ಬೆಂಬಲಿಸಿತ್ತು.

ಅನುಷ್ಠಾನ ನಿರ್ದೇಶನಾಲಯವು ಈ ತಿಂಗಳ ಆರಂಭದಲ್ಲಿ, ವಿಚಾರಣೆಗೆ ಹಾಜರಾಗುವಂತೆ ದಾತಾರ್‌ಗೆ ಸಮನ್ಸ್ ನೀಡಿತ್ತು. ಆದರೆ, ವಕೀಲ ಸಮುದಾಯದಿಂದ ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನೋಟಿಸನ್ನು ವಾಪಸ್ ಪಡೆದುಕೊಳ್ಳಲಾಗಿತ್ತು.

ಶುಕ್ರವಾರ ಭಾರತದ ಮುಖ್ಯ ನ್ಯಾಯಾಧೀಶರಿಗೆ ಬರೆದ ಪತ್ರದಲ್ಲಿ, ಎಸ್‌ಸಿಎಒಆರ್‌ಎ ಅಧ್ಯಕ್ಷ ವಿಪಿನ್ ನಾಯರ್, ಅನುಷ್ಠಾನ ನಿರ್ದೇಶನಾಲಯದ ಕೃತ್ಯವನ್ನು ‘‘ಅತ್ಯಂತ ಗಂಭೀರ ಬೆಳವಣಿಗೆ’’ ಎಂಬುದಾಗಿ ಬಣ್ಣಿಸಿದ್ದಾರೆ. ಇಂಥ ಬಲವಂತದ ಕ್ರಮಗಳು ಕಾನೂನು ವೃತ್ತಿದಾರರ ಹಕ್ಕುಗಳು ಹಾಗೂ ಕಾನೂನಿನ ಆಡಳಿತದ ಮೂಲಭೂತ ತತ್ವಗಳ ಹೃದಯಕ್ಕೆ ನೀಡುವ ಹೊಡೆತವಾಗಿವೆ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News