‘ಉದಯಪುರ ಫೈಲ್ಸ್’ ಚಲನಚಿತ್ರ ಬಿಡುಗಡೆಗೆ ತಡೆ ನೀಡುವಂತೆ ಕೋರಿದ ಅರ್ಜಿ ತಿರಸ್ಕರಿಸಿದ ಸುಪ್ರೀಂ
ಉದಯಪುರ ಫೈಲ್ಸ್
ಹೊಸದಿಲ್ಲಿ: ಸುಪ್ರೀಂ ಕೋರ್ಟ್ ಬುಧವಾರ ತನ್ನ ಆದೇಶದಲ್ಲಿ ಉದಯಪುರದಲ್ಲಿ ಹತ್ಯೆಯಾದ ದರ್ಜಿ ಕನ್ಹಯ್ಯ ಲಾಲ್ ತೇಲಿಯ ಜೀವನಾಧರಿತ ‘‘ಉದಯಪುರ ಫೈಲ್ಸ್’’ ಚಲನಚಿತ್ರದ ಬಿಡುಗಡೆಗೆ ತಡೆ ನೀಡಲು ಹಾಗೂ ಅರ್ಜಿಯ ತುರ್ತು ವಿಚಾರಣೆ ನಡೆಸಲು ನಿರಾಕರಿಸಿದೆ.
ಮುಹಮ್ಮದ್ ಜಾವೇದ್ ಅವರ ಅರ್ಜಿಯ ಕುರಿತು ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಹಾಗೂ ಜೋಯ್ಮಲ್ಯ ಬಾಗ್ಚಿ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್ನ ಇಬ್ಬರು ಸದಸ್ಯರ ರಜಕಾಲದ ಪೀಠ ಯಾವುದೇ ಆದೇಶ ನೀಡಲು ನಿರಾಕರಿಸಿತು. 2022ರಲ್ಲಿ ಉದಯಪುರ ಮೂಲದ ದರ್ಜಿಯ ಬರ್ಬರ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಮುಹಮ್ಮದ್ ಜಾವೇದ್ ಕೂಡ ಒಬ್ಬರು.
ಜುಲೈ 11ರಂದು ಬಿಡುಗಡೆಗೊಳ್ಳಲಿರುವ ‘‘ಉದಯಪುರ ಫೈಲ್ಸ್ ಕನ್ಹಯ್ಯಲಾಲ್ ಟೈಲರ್ ಮರ್ಡರ್’’ ಚಿತ್ರದ ಬಿಡುಗಡೆಗೆ ತಡೆ ನೀಡುವಂತೆ ಹಾಗೂ ನ್ಯಾಯಯುತವಾಗಿ ವಿಚಾರಣೆ ನಡೆಸುವಂತೆ ಕೋರಿ ಮುಹಮ್ಮದ್ ಜಾವೇದ್ ಅವರು ಮಂಗಳವಾರ ಸುಪ್ರೀಂ ಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.
ಚಲನಚಿತ್ರ ಘಟನೆಯ ಪಾರ್ಶ್ವಿಕ ಚಿತ್ರಣವನ್ನು ಮಾತ್ರ ನೀಡುತ್ತದೆ. ಅಲ್ಲದೆ ಅದು ಅವರ ನ್ಯಾಯಯುತ ವಿಚಾರಣೆಗೆ ಒಳಗಾಗುವ ಹಕ್ಕಿಗೆ ಹಾನಿ ಉಂಟು ಮಾಡುತ್ತದೆ. ಈ ನೆಲೆಯಲ್ಲಿ ಚಲನಚಿತ್ರದ ಬಿಡುಗಡೆಗೆ ತಡೆ ನೀಡುವಂತೆ ದೂರುದಾರ ಜಾವೇದ್ ಅವರ ವಕೀಲರು ಕೋರಿದ್ದರು.