×
Ad

ಮಸೂದೆಗಳಿಗೆ ಸಹಿ ಹಾಕಲು ಗಡುವು ಕುರಿತು ರಾಷ್ಟ್ರಪತಿಗಳ ಉಲ್ಲೇಖ: ಕೇಂದ್ರ, ರಾಜ್ಯಗಳಿಗೆ ಸುಪ್ರೀಂ ನೋಟಿಸ್

Update: 2025-07-22 19:58 IST

ಸುಪ್ರೀಂ ಕೋರ್ಟ್ | PTI

ಹೊಸದಿಲ್ಲಿ,ಜು.22: ಮಸೂದೆಗಳಿಗೆ ಒಪ್ಪಿಗೆ ನೀಡುವ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳ ಅಧಿಕಾರಗಳಿಗೆ ಸಂಬಂಧಿಸಿದಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾಡಿರುವ ಅಧ್ಯಕ್ಷೀಯ ಉಲ್ಲೇಖ ಕುರಿತು ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಮತ್ತು ಎಲ್ಲ ರಾಜ್ಯ ಸರಕಾರಗಳಿಗೆ ಮಂಗಳವಾರ ನೋಟಿಸ್‌ಗಳನ್ನು ಹೊರಡಿಸಿದೆ. ಅಧ್ಯಕ್ಷೀಯ ಉಲ್ಲೇಖವು ಭಾರತದ ರಾಷ್ಟ್ರಪತಿಗಳು ಕಾನೂನು ಅಥವಾ ಸಾರ್ವಜನಿಕ ಹಿತಾಸಕ್ತಿಗಳ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯದಿಂದ ಸಲಹೆ ಪಡೆಯುವ ಕಾರ್ಯವಿಧಾನವಾಗಿದೆ.

ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ, ವಿಕ್ರಮನಾಥ,ಪಿ.ಎಸ್.ನರಸಿಂಹ ಮತ್ತು ಎ.ಎಸ್.ಚಂದುರ್ಕರ್ ಅವರನ್ನೊಳಗೊಂಡ ಸಂವಿಧಾನ ಪೀಠವು ಜು.29ಕ್ಕೆ ವಿಚಾರಣೆಯನ್ನು ನಿಗದಿಗೊಳಿಸಿತು.

ಮಂಗಳವಾರ ನಡೆದ ಸಂಕ್ಷಿಪ್ತ ವಿಚಾರಣೆ ಸಂದರ್ಭದಲ್ಲಿ ಪೀಠವು ಈ ವಿಷಯದಲ್ಲಿ ನ್ಯಾಯಾಲಯಕ್ಕೆ ನೆರವಾಗುವಂತೆ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರನ್ನು ಕೇಳಿಕೊಂಡಿತು. ಭಾರತ ಒಕ್ಕೂಟದ ಪರವಾಗಿ ತಾನು ಹಾಜರಾಗುವುದಾಗಿ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ತಿಳಿಸಿದರು.

ಕೇರಳವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ.ಕೆ.ವೇಣುಗೋಪಾಲ ಅವರು,ಅಧ್ಯಕ್ಷೀಯ ಉಲ್ಲೇಖದ ನಿರ್ವಹಣಾರ್ಹತೆಯನ್ನು ರಾಜ್ಯವು ಪ್ರಶ್ನಿಸಲಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಪ್ರಸ್ತುತ ಎತ್ತಲಾಗಿರುವ ವಿಷಯಗಳನ್ನು ಈಗಾಗಲೇ ತಮಿಳುನಾಡು ರಾಜ್ಯಪಾಲರ ಪ್ರಕರಣದಲ್ಲಿ ಬಗೆಹರಿಸಲಾಗಿದೆ ಎಂದು ವಾದಿಸಿದ ತಮಿಳುನಾಡು ಪರ ಹಿರಿಯ ವಕೀಲ ಪಿ.ವಿಲ್ಸನ್ ಅವರು,ರಾಜ್ಯವು ಸಹ ಅಧ್ಯಕ್ಷೀಯ ಉಲ್ಲೇಖದ ನಿರ್ವಹಣಾರ್ಹತೆಯನ್ನು ಪ್ರಶ್ನಿಸಲಿದೆ ಎಂದು ಹೇಳಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 14 ಪ್ರಶ್ನೆಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಉಲ್ಲೇಖಿಸಿದ್ದು,ಒಪ್ಪಿಗೆಗಾಗಿ ಸಲ್ಲಿಸಲಾದ ಅಥವಾ ಪರಿಗಣನೆಗಾಗಿ ಕಾಯ್ದಿರಿಸಲಾದ ರಾಜ್ಯ ಮಸೂದೆಗಳನ್ನು ನಿರ್ವಹಿಸುವಾಗ ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಗಡುವುಗಳನ್ನು ವಿಧಿಸಲು ಅಥವಾ ಕಾರ್ಯವಿಧಾನವನ್ನು ನಿರ್ದೇಶಿಸಲು ನ್ಯಾಯಾಲಯವು ಸಂವಿಧಾನದ ವಿಧಿ 142ರಡಿ ತನ್ನ ಅಂತರ್ಗತ ಅಧಿಕಾರವನ್ನು ಬಳಸಬಹುದೇ ಎನ್ನುವುದರ ಕುರಿತು ಅದರ ಅಭಿಪ್ರಾಯವನ್ನು ಕೋರಿದ್ದಾರೆ.

ಸಂವಿಧಾನದ ವಿಧಿ 143ರಡಿ ಈ ಉಲ್ಲೇಖವನ್ನು ಮಾಡಲಾಗಿದ್ದು,ಮಸೂದೆಯನ್ನು ಅನುಮೋದನೆಗಾಗಿ ಸಲ್ಲಿಸಿದಾಗ ವಿಧಿ 200ರಡಿ ರಾಜ್ಯಪಾಲರಿಗೆ ಲಭ್ಯವಿರುವ ಸಾಂವಿಧಾನಿಕ ಆಯ್ಕೆಗಳ ಕುರಿತು ಸ್ಪಷ್ಟೀಕರಣವನ್ನು ಕೋರಲಾಗಿದೆ.

142ನೇ ವಿಧಿಯನ್ನು ಅಪರೂಪಕ್ಕೆ ಬಳಸಲಾಗುತ್ತದೆ ಮತ್ತು ಗಂಭೀರ ಸಾಂವಿಧಾನಿಕ ಅಥವಾ ರಾಷ್ಟ್ರೀಯ ಮಹತ್ವದ ವಿಷಯಗಳಿಗಾಗಿ ಅದನ್ನು ಮೀಸಲಿಡಲಾಗಿದೆ.

ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಆರ್.ಮಹಾದೇವನ್ ಅವರನ್ನೊಳಗೊಂಡಿದ್ದ ಪೀಠದ ಎ.8ರ ತೀರ್ಪು ಸರ್ವೋಚ್ಚ ನ್ಯಾಯಾಲಯದ ಅಭಿಪ್ರಾಯವನ್ನು ಕೋರುವ ರಾಷ್ಟ್ರಪತಿಗಳ ನಿರ್ಧಾರಕ್ಕೆ ಕಾರಣವಾಗಿದೆ.

ರಾಜ್ಯ ವಿಧಾನಸಭೆಯು ಮರು ಅಂಗೀಕರಿಸಿದ್ದ 10 ಮಸೂದೆಗಳಿಗೆ ಒಪ್ಪಿಗೆ ನೀಡುವಲ್ಲಿ ರಾಜ್ಯಪಾಲರ ಸುದೀರ್ಘ ವಿಳಂಬ ಮತ್ತು ನಂತರ ಅವುಗಳನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಾಯ್ದಿರಿಸಿದ್ದ ಕ್ರಮವನ್ನು ಪ್ರಶ್ನಿಸಿ ತಮಿಳುನಾಡು ಸರಕಾರವು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಎ.8ರ ತೀರ್ಪು ಹೊರಬಿದ್ದಿತ್ತು. ರಾಜ್ಯಪಾಲರ ಕ್ರಮಗಳನ್ನು ಅಸಾಂವಿಧಾನಿಕ ಎಂದು ತನ್ನ ತೀರ್ಪಿನಲ್ಲಿ ಪರಿಗಣಿಸಿದ್ದ ಸರ್ವೋಚ್ಚ ನ್ಯಾಯಾಲಯವು,142ನೇ ವಿಧಿಯನ್ನು ಬಳಸಿಕೊಂಡು ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರು ರಾಜ್ಯ ಶಾಸನಗಳಿಗೆ ಒಪ್ಪಿಗೆ ನೀಡಲು ಗಡುವುಗಳನ್ನು ವಿಧಿಸಿತ್ತು.

ರಾಜ್ಯಪಾಲರಿಂದ ಮಸೂದೆಯನ್ನು ಸ್ವೀಕರಿಸಿದ ಮೂರು ತಿಂಗಳುಗಳಲ್ಲಿ ರಾಷ್ಟ್ರಪತಿಗಳು ಅದರ ಬಗ್ಗೆ ನಿರ್ಧಾರವನ್ನು ತೆಗದುಕೊಳ್ಳಬೇಕು ಎಂದು ಹೇಳಿದ್ದ ಸರ್ವೋಚ್ಚ ನ್ಯಾಯಾಲಯವು ಮೊದಲ ಬಾರಿಗೆ ಇಂತಹ ಗಡುವನ್ನು ನಿಗದಿಗೊಳಿಸಿತ್ತು. ಗಡುವನ್ನು ಮೀರಿ ಯಾವುದೇ ವಿಳಂಬವಾದರೆ ಅದಕ್ಕೆ ಕಾರಣಗಳನ್ನು ಸಂಬಂಧಿಸಿದ ರಾಜ್ಯಕ್ಕೆ ತಿಳಿಸುವಂತೆ ಅದು ರಾಷ್ಟ್ರಪತಿಗಳ ಕಚೇರಿಗೆ ಸೂಚಿಸಿತ್ತು.

ತೀರ್ಪನ್ನು ತೀವ್ರವಾಗಿ ಟೀಕಿಸಿದ್ದ ಮಾಜಿ ಉಪರಾಷ್ಟ್ರಪತಿ ಜಗದೀಪ ಧನ್ಕರ್ ಅವರು,ರಾಷ್ಟ್ರಪತಿಗಳಿಗೆ ನಿರ್ದೇಶನವನ್ನು ಹೊರಡಿಸುವ ಸರ್ವೋಚ್ಚ ನ್ಯಾಯಾಲಯದ ಅಧಿಕಾರವನ್ನು ಪ್ರಶ್ನಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News