ಅಸ್ಸಾಂ| ಧ್ವಂಸ ಮತ್ತು ಒಕ್ಕಲೆಬ್ಬಿಸುವ ಕಾರ್ಯಾಚರಣೆಯಲ್ಲಿ ನಿರ್ದೇಶನ ಉಲ್ಲಂಘನೆ; ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಗೆ ಸುಪ್ರೀಂ ಒಪ್ಪಿಗೆ
ಸುಪ್ರೀಂ ಕೋರ್ಟ್ | PTI
ಹೊಸದಿಲ್ಲಿ: ಅಸ್ಸಾಂ ಸರಕಾರವು ಗೋಲ್‌ಪಾರ ಜಿಲ್ಲೆಯಲ್ಲಿ ನಡೆಸಿದ ಧ್ವಂಸ ಕಾರ್ಯಾಚರಣೆಯ ವೇಳೆ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಉಲ್ಲಂಘಿಸಿದ್ದಾರೆನ್ನಲಾದ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕಲಾಪ ಆರಂಭಿಸಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಕೊಂಡಿದೆ.
ಈ ವಿಷಯದಲ್ಲಿ ಎರಡು ವಾರಗಳೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿ ಮುಖ್ಯ ನ್ಯಾಯಾಧೀಶ ಬಿ.ಆರ್. ಗವಾಯಿ ಮತ್ತು ನ್ಯಾಯಾಧೀಶ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ನ್ಯಾಯಪೀಠವೊಂದು ಅಸ್ಸಾಂ ಮುಖ್ಯ ಕಾರ್ಯದರ್ಶಿ ಮತ್ತು ಇತರರಿಗೆ ನೋಟಿಸ್‌ಗಳನ್ನು ಜಾರಿಗೊಳಿಸಿತು.
ಜೂನ್‌ನಲ್ಲಿ ಬೃಹತ್ ಧ್ವಂಸ ಮತ್ತು ಒಕ್ಕಲೆಬ್ಬಿಸುವ ಕಾರ್ಯಾಚರಣೆ ನಡೆಯಿತು ಹಾಗೂ 667ಕ್ಕೂ ಅಧಿಕ ಕುಟುಂಬಗಳನ್ನು ಹೊರದಬ್ಬಲಾಯಿತು ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ವೈಯಕ್ತಿಕ ವಿಚಾರಣೆ ನಡೆಸದೆ ಹಾಗೂ ಮೇಲ್ಮನವಿ ಸಲ್ಲಿಕೆ ಅಥವಾ ನ್ಯಾಯಾಂಗ ಪರಿಶೀಲನೆಗೆ ಸಾಕಷ್ಟು ಸಮಯಾವಕಾಶ ನೀಡದೆ ಧ್ವಂಸ ಕಾರ್ಯಾಚರಣೆ ನಡೆಸಲಾಯಿತು ಎಂದು ಗೋಲ್‌ಪಾರ ಜಿಲ್ಲೆಯ ಎಂಟು ನಿವಾಸಿಗಳು ಸಲ್ಲಿಸಿರುವ ಅರ್ಜಿಯಲ್ಲಿ ಆರೋಪಿಸಲಾಗಿದೆ.
‘‘ಅದೂ ಅಲ್ಲದೆ, ಒಕ್ಕಲೆಬ್ಬಿಸುವಿಕೆ ಮತ್ತು ಧ್ವಂಸ ಕಾರ್ಯಾಚರಣೆಯನ್ನು ಮುಖ್ಯವಾಗಿ ಒಂದು ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿ ನಡೆಸಲಾಗಿದೆ. ಇದೇ ರೀತಿಯಲ್ಲಿ ವಾಸಿಸುತ್ತಿರುವ ಬಹುಸಂಖ್ಯಾತ ಸಮುದಾಯಕ್ಕೆ ಸೇರಿದ ಜನರನ್ನು ಈ ಕಾರ್ಯಾಚರಣೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಆ ಮೂಲಕ ಧ್ವಂಸ ಮತ್ತು ಒಕ್ಕಲೆಬ್ಬಿಸುವಿಕೆ ಕಾರ್ಯಾಚರಣೆಯನ್ನು ತಾರತಮ್ಯದಿಂದ ನಡೆಸಲಾಗಿದೆ’’ ಎಂದು ವಕೀಲ ಅದೀಲ್ ಅಹ್ಮದ್ ಮೂಲಕ ಸಲ್ಲಿಸಲಾಗಿರುವ ಅರ್ಜಿ ಆರೋಪಿಸಿದೆ.