×
Ad

ದಾಂಪತ್ಯ ಜೀವನ ಸಾಗಿಸಬೇಕು ಎಂದು ಷರತ್ತಿನೊಂದಿಗೆ ನಿರೀಕ್ಷಣಾ ಜಾಮೀನು ಮಂಜೂರು; ಜಾರ್ಖಂಡ್ ಹೈಕೋರ್ಟ್ ಆದೇಶವನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್

Update: 2025-08-02 20:23 IST

ಸುಪ್ರೀಂ ಕೋರ್ಟ್ | PC :  PTI 

ಹೊಸದಿಲ್ಲಿ: ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಆರೋಪಿಯಾಗಿದ್ದ ವ್ಯಕ್ತಿಯೊಬ್ಬರಿಗೆ, ಪತ್ನಿಯೊಂದಿಗೆ ದಾಂಪತ್ಯ ಜೀವನ ಸಾಗಿಸಬೇಕು ಹಾಗೂ ಪತ್ನಿಯೊಂದಿಗೆ ಘನತೆಯ ಮತ್ತು ಗೌರವಯುತ ದಾಂಪತ್ಯ ನಡೆಸಬೇಕು ಎಂಬ ಷರತ್ತು ವಿಧಿಸಿ, ಜಾರ್ಖಂಡ್ ಹೈಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನು ಆದೇಶವನ್ನು ಸುಪ್ರೀಂ ಕೋರ್ಟ್ ಬದಿಗಿರಿಸಿದೆ.

ಫೆಬ್ರವರಿ 25, 2025ರಲ್ಲಿ ಜಾರ್ಖಂಡ್ ಹೈಕೋರ್ಟ್ ನೀಡಿದ್ದ ಈ ಆದೇಶವನ್ನು ಪ್ರಶ್ನಿಸಿ ಅನಿಲ್ ಕುಮಾರ್ ಎಂಬುವವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ದೀಪಂಕರ್ ದತ್ತ ಮತ್ತು ನ್ಯಾ. ಆಗಸ್ಟಿನ್ ಜಾರ್ಜ್ ಮಾಸಿಹ್ ಅವರನ್ನೊಳಗೊಂಡ ನ್ಯಾಯಪೀಠ, ಇಂತಹ ದೋಷಾರೋಪ ಹೊಂದಿರುವ ಪ್ರಕರಣದಲ್ಲಿ ಇಂತಹ ಷರತ್ತು ವಿಧಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯ ಪಟ್ಟಿತು.

“ಪತ್ನಿಯೊಂದಿಗೆ ಘನತೆ ಮತ್ತು ಗೌರವಯುತ ದಾಂಪತ್ಯ ಜೀವನ ಸಾಗಿಸಬೇಕು ಎಂದು ಷರತ್ತು ವಿಧಿಸುವುದು ಈ ಪ್ರಕರಣದಲ್ಲಿ ಮತ್ತಷ್ಟು ವಿವಾದವನ್ನು ಸೃಷ್ಟಿಸಲಿದೆ” ಎಂಬುದರತ್ತ ನ್ಯಾಯಪೀಠ ಬೊಟ್ಟು ಮಾಡಿತು.

“ಇಂತಹ ಷರತ್ತುಗಳನ್ನು ಪಾಲಿಸದಿದ್ದರೆ, ಆರೋಪಿಯ ಜಾಮೀನು ರದ್ದುಗೊಳಿಸಬೇಕು ಎಂದು ನಂತರ ಅರ್ಜಿ ಸಲ್ಲಿಕೆಯಾದರೆ, ಮೇಲ್ಮನವಿದಾರನಿಂದ ಅದಕ್ಕೆ ವಿರೋಧ ವ್ಯಕ್ತವಾಗಬಹುದು ಹಾಗೂ ಇದು ಹೈಕೋರ್ಟ್ ಅನ್ನು ಮತ್ತಷ್ಟು ಸಮಸ್ಯೆಗೆ ಸಿಲುಕಿಸಬಹುದು. ನಿರೀಕ್ಷಣಾ ಜಾಮೀನು ವಿಚಾರದಲ್ಲಿ ವ್ಯಾಜ್ಯದ ವಾಸ್ತವ ಪ್ರಶ್ನೆಯನ್ನು ಹೈಕೋರ್ಟ್ ತನ್ನನ್ನು ತಟಸ್ಥಗೊಳಿಸಿಕೊಂಡು ಬಗೆಹರಿಸುವ ಮಾರ್ಗವನ್ನು ಕಂಡುಕೊಳ್ಳಬಹುದಾಗಿದೆ” ಎಂದು ಜುಲೈ 29, 2025ರ ತನ್ನ ಆದೇಶದಲ್ಲಿ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಇದಕ್ಕೂ ಮುನ್ನ, ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ತನಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ಫೆಬ್ರವರಿ 25, 2025ರಂದು ಜಾರ್ಖಂಡ್ ಹೈಕೋರ್ಟ್ ವಿಧಿಸಿರುವ ಷರತ್ತನ್ನು ಪ್ರಶ್ನಿಸಿ ಅನಿಲ್ ಕುಮಾರ್ ಎಂಬುವವರು ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಅಂಗೀಕರಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News