ಜಮ್ಮು-ಕಾಶ್ಮೀರದ ರಾಜ್ಯ ಸ್ಥಾನಮಾನ ಮರು ಸ್ಥಾಪನೆ ಕೋರಿ ಅರ್ಜಿ : ಪ್ರತಿಕ್ರಿಯಿಸಲು ಕೇಂದ್ರ ಸರಕಾರಕ್ಕೆ 4 ವಾರ ಕಾಲಾವಕಾಶ ನೀಡಿದ ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ |Photo Credit ; sci.gov.in
ಹೊಸದಿಲ್ಲಿ, ಅ. 10: ಜಮ್ಮು ಹಾಗೂ ಕಾಶ್ಮೀರದ ರಾಜ್ಯ ಸ್ಥಾನಮಾನ ಮರು ಸ್ಥಾಪಿಸುವಂತೆ ಕೋರಿ ಸಲ್ಲಿಸಿದ ಸರಣಿ ಅರ್ಜಿಗಳಿಗೆ ಪ್ರತಿಕ್ರಿಯಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರಕಾರಕ್ಕೆ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಹಾಗೂ ನ್ಯಾಯಮೂರ್ತಿ ಕೆ.ವಿನೋದ್ ಚಂದ್ರನ್ ನೇತೃತ್ವದ ಪೀಠ ವಿದ್ವಾಂಸ ಝಹೂರ್ ಅಹ್ಮದ್ ಭಟ್ ಹಾಗೂ ಸಾಮಾಜಿಕ-ರಾಜಕೀಯ ಹೋರಾಟಗಾರ ಅಹ್ಮದ್ ಮಲಿಕ್ ಸಲ್ಲಿಸಿದ ಅರ್ಜಿ ಸೇರಿದಂತೆ ಹಲವು ಅರ್ಜಿಗಳ ವಿಚಾರಣೆ ನಡೆಸಿತು.
ಜಮ್ಮು ಹಾಗೂ ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಆದಷ್ಟು ಬೇಗ ಮರು ಸ್ಥಾಪಿಸುವುದಾಗಿ ಈ ಹಿಂದೆ ಕೇಂದ್ರ ಸರಕಾರ ನೀಡಿದ್ದ ಭರವಸೆಯ ಅನುಷ್ಠಾನದ ಖಾತರಿ ನೀಡುವಂತೆ ದೂರುದಾರರು ನ್ಯಾಯಾಲಯದಲ್ಲಿ ಮನವಿ ಮಾಡಿದರು.
ವಿಚಾರಣೆಯ ಸಂದರ್ಭ ಅರ್ಜಿದಾರರ ವಕೀಲರು ಸುಪ್ರೀಂ ಕೋರ್ಟ್ 370ನೆ ವಿಧಿಯ ರದ್ದತಿಯನ್ನು ಎತ್ತಿ ಹಿಡಿದು 2023 ಡಿಸೆಂಬರ್‌ನಲ್ಲಿ ನೀಡಿದ ತೀರ್ಪಿನ ಬಗ್ಗೆ ಗಮನ ಸೆಳೆದರು.
ಜಮ್ಮು ಹಾಗೂ ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡುವುದಾಗಿ ಕೇಂದ್ರ ಸರಕಾರ ವಾಗ್ದಾನ ನೀಡಿದೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಈಗ ಈ ವಾಗ್ದಾನವನ್ನು ಜಾರಿಗೊಳಿಸುವಂತೆ ದೂರುದಾರರು ಆಗ್ರಹಿಸಿದ್ದಾರೆ.
ಕೇಂದ್ರ ಸರಕಾರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈ ವಿಷಯದ ಕುರಿತಂತೆ ಜಮ್ಮು ಹಾಗೂ ಕಾಶ್ಮೀರ ಆಡಳಿತದೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಪೀಠಕ್ಕೆ ಮಾಹಿತಿ ನೀಡಿದರು.