ರಾಷ್ಟ್ರೀಯ ಉದ್ಯಾನವನ, ಅಭಯಾರಣ್ಯಗಳಲ್ಲಿ ಗಣಿಗಾರಿಕೆ ನಿಷೇಧಿಸಿ ಸುಪ್ರೀಂಕೋರ್ಟ್ ಆದೇಶ
ಸುಪ್ರೀಂಕೋರ್ಟ್ | Photo Credit : PTI
ಹೊಸದಿಲ್ಲಿ,ನ.14: ರಾಷ್ಟ್ರೀಯ ಉದ್ಯಾನವನಗಳು ಹಾಗೂ ವನ್ಯಜೀವಿ ಅಭಯಾರಣ್ಯಗಳಲ್ಲಿರುವ ಒಂದು ಕಿ.ಮೀ. ವ್ಯಾಪ್ತಿಯೊಳಗೆ ಗಣಿಗಾರಿಕೆಯನ್ನು ನಿಷೇಧಿಸಿ ಸುಪ್ರೀಂಕೋರ್ಟ್ ಗುರುವಾರ ಆದೇಶ ಹೊರಡಿಸಿದೆ. ಗಣಿಗಾರಿಕೆಯಂತಹ ಚಟುವಟಿಕೆಗಳು ವನ್ಯಜೀವಿ ಸಂಕುಲಕ್ಕೆ ಅಪಾಯಕಾರಿಯಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಪ್ರತಿಪಾದಿಸಿದೆಯೆಂದು ‘ಲೈವ್ ಲಾ’ ಸುದ್ದಿಸಂಸ್ಥೆ ವರದಿ ಮಾಡಿದೆ.
ಗೋವಾದಲ್ಲಿಯೂ ಗಣಿಗಾರಿಕೆಗೆ ಇದೇ ರೀತಿಯ ನಿರ್ಬಂಧಗಳನ್ನು ವಿಧಿಸಿದ ತನ್ನ ಎಪ್ರಿಲ್, 2023ರ ಆದೇಶವನ್ನು ಪುನರುಚ್ಚರಿಸಿದ ನ್ಯಾಯಾಲಯವು, ಈ ನಿರ್ದೇಶನವು ಇಡೀ ದೇಶಕ್ಕೆ ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಿದೆ.
ಜಾರ್ಖಂಡ್‌ನ ಸಾರಂಡಾ ಅರಣ್ಯ ಪ್ರದೇಶವನ್ನು ವನ್ಯಜೀವಿ ಅಭಯಾರಣ್ಯವೆಂದು ಅಧಿಸೂಚನೆ ಹೊರಡಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಸಂದರ್ಭ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಹಾಗೂ ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ನ್ಯಾಯಪೀಠವು ಈ ತೀರ್ಪನ್ನು ನೀಡಿದೆ.
ಸಾರಂಡಾ ಅರಣ್ಯ ಪ್ರದೇಶವನ್ನು ವನ್ಯಜೀವಿ ಅಭಯಾರಣ್ಯವೆಂಬುದಾಗಿ ಅಧಿಸೂಚನೆ ಹೊರಡಿಸುವಂತೆ ನ್ಯಾಯಪೀಠವು ಜಾರ್ಖಂಡ್ ಸರಕಾರಕ್ಕೆ ಆದೇಶಿಸಿತು.
ಅರಣ್ಯ ಹಕ್ಕುಗಳ ಕಾಯ್ದೆಗೆ ಅನುಗುಣವಾಗಿ ಈ ಪ್ರದೇಶದ ಆದಿವಾಸಿಗಳು ಹಾಗೂ ಅರಣ್ಯವಾಸಿ ಸಮುದಾಯಗಳ ಹಕ್ಕುಗಳನ್ನು ರಕ್ಷಿಸಬೇಕೆಂದು ನ್ಯಾಯಾಲಯ ಪ್ರತಿಪಾದಿಸಿತು. ಈ ಪ್ರದೇಶದಲ್ಲಿರುವ ಎಲ್ಲಾ ಶಾಲೆಗಳು, ರೈಲು ಮಾರ್ಗಗಳು ಹಾಗೂ ಔಷಧಾಲಯಗಳನ್ನು ರಕ್ಷಿಸಬೇಕಾಗಿದೆಯೆಂದು ನ್ಯಾಯಪೀಠ ಹೇಳಿರುವುದಾಗಿ ‘ಲೈವ್ ಲಾ ’ ವರದಿ ತಿಳಿಸಿದೆ.
202 ಎಕರೆಗೂ ಅಧಿಕ ವಿಸ್ತೀರ್ಣದ ಸಾರಂಡಾ ಅರಣ್ಯವು ಈ ಮೊದಲು ಹಲವಾರು ಆದಿವಾಸಿ ಪಂಗಡಗಳಿಗೆ, ವೈವಿಧ್ಯಮಯ ಸಸ್ಯ ಹಾಗೂ ವನ್ಯಜೀವಿ ಸಂಕುಲಗಳ ಆವಾಸತಾಣವಾಗಿತ್ತು .
2 ಸಾವಿರ ದಶಲಕ್ಷ ಟನ್‌ಗೂ ಅಧಿಕ ಕಬ್ಬಿಣದ ಆದಿರಿನ ನಿಕ್ಷೇಪವನ್ನು ಹೊಂದಿರುವ ಈ ಅರಣ್ಯ ಪ್ರದೇಶವು , 1990ನೇ ಇಸವಿಯ ಆರಂಭದವರೆಗೂ ಪ್ರಮುಖ ಆನೆ ಕಾರಿಡಾರ್ ಕೂಡಾ ಆಗಿತ್ತು.