ಉಮರ್, ಶರ್ಜಿಲ್ ಗೆ ಜಾಮೀನು ನಿರಾಕರಣೆ: ಸುಪ್ರೀಂ ಕೋರ್ಟ್ ತೀರ್ಪು ಪ್ರಶ್ನಿಸಿದ ಪ್ರತಿಪಕ್ಷದ ನಾಯಕರು
ಉಮರ್ ಖಾಲಿದ್ ಹಾಗೂ ಶರ್ಜಿಲ್ ಇಮಾಮ್ | Photo Credit : PTI
ಹೊಸದಿಲ್ಲಿ, ಜ. 5: 2020ರ ದಿಲ್ಲಿ ಗಲಭೆಯಲ್ಲಿ ಪಿತೂರಿ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಾಮಾಜಿಕ ಹೋರಾಟಗಾರರಾದ ಉಮರ್ ಖಾಲಿದ್ ಹಾಗೂ ಶರ್ಜಿಲ್ ಇಮಾಮ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿರುವುದನ್ನು ಹಲವು ಪ್ರತಿಪಕ್ಷಗಳ ನಾಯಕರು ಸೋಮವಾರ ಪ್ರಶ್ನಿಸಿದ್ದಾರೆ.
ಸುಪ್ರೀಂ ಕೋರ್ಟ್‌ನ ಆದೇಶವನ್ನು ಆಘಾತಕಾರಿ ಎಂದು ಹೇಳಿರುವ ಸಿಪಿಐ (ಎಂ) ಪ್ರಧಾನ ಕಾರ್ಯದಶಿ ಎಂ.ಎ. ಬೇಬಿ, ವಿಚಾರಣೆ ಇಲ್ಲದೆ ಸಾಮಾಜಿಕ ಹೋರಾಟಗಾರರನ್ನು 5 ವರ್ಷಗಳು ಜೈಲಿನಲ್ಲಿರಿಸಿರುವುದು ಸಾಂವಿಧಾನಿಕ ಉಲ್ಲಂಘನೆಯಾಗಿಲ್ಲ ಎಂಬ ಸುಪ್ರೀಂ ಕೋರ್ಟ್‌ನ ಅಭಿಪ್ರಾಯವನ್ನು ಪ್ರಶ್ನಿಸಿದರು.
‘‘ಇದೇ ಸಂದರ್ಭ 2017ರ ಪ್ರಕರಣದಲ್ಲಿ ದೋಷಿಯಾಗಿರುವ ಗುರ್ಮಿತ್ ಸಿಂಗ್ ಪರೋಲ್‌ನಲ್ಲಿ 15ನೇ ಬಾರಿ ಜೈಲಿನಿಂದ ಹೊರಗೆ ಬಂದಿದ್ದಾನೆ. ಇದು ನಾಚಿಕೆಗೇಡಿನ ಹಾಗೂ ಸ್ವೀಕಾರಾರ್ಹವಲ್ಲದ ಸಂಗತಿ’’ ಎಂದು ಅವರು ಹೇಳಿದ್ದಾರೆ.
ಸಿಪಿಐ (ಎಂ) ರಾಜ್ಯ ಸಭಾ ಸದಸ್ಯ ಜಾನ್ ಬ್ರಿಟ್ಟಾಸ್, ‘‘ಜಾಮೀನು ನಿಯಮ, ಜೈಲು ಅಪವಾದ’’ ನಿರ್ದಿಷ್ಟ ವ್ಯಕ್ತಿಗೆ ಅನ್ವಯಿಸುವುದಿಲ್ಲ ಎಂಬುದು ಸ್ಪಷ್ಟ ಎಂದಿದ್ದಾರೆ.
‘‘ಒಬ್ಬರು ವಿಚಾರಣೆ ಇಲ್ಲದೆ ಜೈಲಿನಲ್ಲಿ ಅನಿರ್ದಿಷ್ಟಾವಧಿ ಕೊಳೆಯುತ್ತಿದ್ದಾರೆ. ಇತರರು ಕೇಳಿದಾಗೆಲ್ಲ ಜಾಮೀನು ದೊರಕುತ್ತದೆ. ಅವರು ಜೈಲಿನ ರಜೆ ಅನುಭವಿಸುತ್ತಿದ್ದಾರೆ’’ ಎಂದು ಅವರು ‘ಎಕ್ಸ್’ನ ಪೋಸ್ಟ್ ನಲ್ಲಿ ಹೇಳಿದ್ದಾರೆ.
ವಿಚಾರಣೆ ಇಲ್ಲದೆ 5ಕ್ಕಿಂತ ಅಧಿಕ ವರ್ಷ ಜೈಲಿನಲ್ಲಿರಿಸುವುದು ನ್ಯಾಯವಲ್ಲ. ಇದು ತೀರ್ಪು ನೀಡದೆ ಶಿಕ್ಷೆ ವಿಧಿಸುವುದು ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಹೇಳಿದ್ದಾರೆ