ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಮೂವರ ಭಡ್ತಿಗೆ ಕೊಲೀಜಿಯಮ್ ಶಿಫಾರಸು
Photo | NDTV
ಹೊಸದಿಲ್ಲಿ: ಸುಪ್ರೀಂ ಕೋರ್ಟ್ ಕೊಲೀಜಿಯಮ್ ಸೋಮವಾರ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಎನ್.ವಿ. ಅಂಜಾರಿಯ, ಗುವಾಹಟಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ವಿಜಯ್ ಬಿಷ್ಣೋಯಿ ಮತ್ತು ಬಾಂಬೆ ಹೈಕೋರ್ಟ್ ನ್ಯಾಯಾಧೀಶ ಎ.ಎಸ್. ಚಂದೂರ್ಕರ್ ರನ್ನು ಸರ್ವೋಚ್ಛ ನ್ಯಾಯಾಲಯದ ನ್ಯಾಯಾಶೀಶರಾಗಿ ಶಿಫಾರಸು ಮಾಡಿದೆ.
ಇತ್ತೀಚೆಗೆ ಮಾಜಿ ಮುಖ್ಯ ನ್ಯಾಯಾಧೀಶ ಸಂಜೀವ್ ಖನ್ನಾ ಹಾಗೂ ನ್ಯಾಯಾಧೀಶರಾದ ಅಭಯ್ ಎಸ್. ಓಕಾ ಮತ್ತು ಹೃಷಿಕೇಶ್ ರಾಯ್ ನಿವೃತ್ತರಾದ ಹಿನ್ನೆಲೆಯಲ್ಲಿ ಉದ್ಭವಿಸಿದ ಮೂರು ಖಾಲಿ ಹುದ್ದೆಗಳಿಗಾಗಿ ಈ ಹೆಸರುಗಳನ್ನು ಮುಖ್ಯ ನ್ಯಾಯಾಧೀಶ ಬಿ.ಆರ್. ಗವಾಯಿ ನೇತೃತ್ವದ ಐವರು ನ್ಯಾಯಾಧೀಶರ ಕೊಲೀಜಿಯಮ್ ಶಿಫಾರಸು ಮಾಡಿದೆ.
‘‘ಮೇ 26ರಂದು ನಡೆದ ಸಭೆಯಲ್ಲಿ, ಸುಪ್ರೀಂ ಕೋರ್ಟ್ ಕೊಲೀಜಿಯಮ್ ಈ ಕೆಳಗಿನ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಮತ್ತು ನ್ಯಾಯಾಧೀಶರಿಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಭಡ್ತಿ ನೀಡಲು ಶಿಫಾರಸು ಮಾಡಿದ- ನ್ಯಾಯಮೂರ್ತಿ ಎನ್.ವಿ. ಅಂಜಾರಿಯ, ನ್ಯಾ. ವಿಜಯ್ ಬಿಷ್ಣೋಯಿ ಮತ್ತು ನ್ಯಾ. ಎ.ಎಸ್. ಚಂದೂರ್ಕರ್’’ ಎಂದು ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಹಾಕಲಾದ ಸಂದೇಶವೊಂದು ತಿಳಿಸಿದೆ.
34 ನ್ಯಾಯಾಧೀಶರ ಬಲದ ಸುಪ್ರೀಂ ಕೋರ್ಟ್‌ನಲ್ಲಿ ಈಗ 31 ನ್ಯಾಯಾಧೀಶರಿದ್ದಾರೆ.