"ಜಿಲ್ಲಾಧಿಕಾರಿಗಳಿಗೆ ವಕ್ಫ್ ಆಸ್ತಿ ವಿವಾದ ನಿರ್ಣಯ ಅಧಿಕಾರ ಬೇಡ": ಸುಪ್ರಿಂಕೋರ್ಟ್ ಹೇಳಿದ್ದೇನು?
Photo credit: PTI
ಹೊಸದಿಲ್ಲಿ: 2025ರ ವಕ್ಫ್ ತಿದ್ದುಪಡಿ ಕಾಯ್ದೆಯಲ್ಲಿನ ಎರಡು ಪ್ರಮುಖ ನಿಬಂಧನೆಗಳಿಗೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ. ವಕ್ಫ್ ಆಸ್ತಿ ಸರಕಾರಿ ಆಸ್ತಿಯನ್ನು ಅತಿಕ್ರಮಣ ಮಾಡಿದೆಯೇ ಎಂಬ ವಿವಾದ ಇತ್ಯರ್ಥಕ್ಕೆ ಜಿಲ್ಲಾಧಿಕಾರಿಗೆ ಅವಕಾಶ ನೀಡುವ ನಿಬಂಧನೆಯನ್ನು ತಡೆಹಿಡಿಯಲಾಗಿದೆ.
ನಾಗರಿಕರ ವೈಯಕ್ತಿಕ ಹಕ್ಕುಗಳನ್ನು ನಿರ್ಣಯಿಸಲು ಸರ್ಕಾರ ನಿಯೋಜಿಸಿದ ಅಧಿಕಾರಿಗೆ ಅನುಮತಿ ನೀಡಲಾಗುವುದಿಲ್ಲ. ಇದು ಅಧಿಕಾರಗಳ ಪ್ರತ್ಯೇಕತೆಯನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಇದಲ್ಲದೆ, ವಕ್ಫ್ ರಚಿಸಲು ಒಬ್ಬ ವ್ಯಕ್ತಿ ಕನಿಷ್ಠ 5 ವರ್ಷಗಳ ಕಾಲ ಇಸ್ಲಾಂ ಧರ್ಮ ಅನುಸರಿಸಿರಬೇಕು ನಿಬಂಧನೆಗೂ ತಡೆ ನೀಡಲಾಗಿದೆ. ರಾಜ್ಯ ಸರ್ಕಾರಗಳು ಈ ಷರತ್ತಿನ ನಿರ್ಣಯಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸುವವರೆಗೆ ಈ ನಿಬಂಧನೆಯನ್ನು ಜಾರಿಗೊಳಿಸುವಂತಿಲ್ಲ ಎಂದು ಪೀಠ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ನ್ಯಾಯಮೂರ್ತಿ ಎಜಿ ಮಸಿಹ್ ಅವರ ಪೀಠ, ಕಾಯ್ದೆಯನ್ನು ಸಂಪೂರ್ಣವಾಗಿ ತಡೆಹಿಡಿಯುವುದಿಲ್ಲ ಎಂದು ಹೇಳಿದೆ. ಅಲ್ಲದೆ ವಕ್ಫ್ ಬೈ ಯೂಸರ್ ವಿಷಯದಲ್ಲಿ ಕೋರ್ಟ್ ಮಧ್ಯಪ್ರವೇಶಿವುದಿಲ್ಲ ಎಂದಿದೆ.
ತಡೆಯಾಜ್ಞೆ ನೀಡುವುದು ಅಪರೂಪದಲ್ಲೇ ಅಪರೂಪದ ಸಂದರ್ಭದಲ್ಲಿ ಮಾತ್ರ ಎಂದಿರುವ ಪೀಠ, ಇಡೀ ಕಾಯ್ದೆಯನ್ನು ಪ್ರಶ್ನಿಸಲಾಗಿದೆ ಎಂದು ಭಾವಿಸಲಾಗಿದ್ದರೂ, ಕೆಲ ನಿಬಂಧನೆಗಳನ್ನು ಮಾತ್ರ ನೇರವಾಗಿ ಪ್ರಶ್ನಿಸಲಾಗಿದೆ ಎಂದು ಹೇಳಿದೆ.
ವಕ್ಫ್ ಗಳ ನೋಂದಣಿ ಷರತ್ತು 1995 ಮತ್ತು 2013ರ ಕಾಯ್ದೆಗಳಲ್ಲಿಯೂ ಇತ್ತು ಎಂದು ಗಮನಿಸಿರುವ ನ್ಯಾಯಾಲಯ, ನೋಂದಣಿ ಕಡ್ಡಾಯಗೊಳಿಸುವ ನಿಬಂಧನೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ.
ವಕ್ಫ್ ಮಂಡಳಿಗಳಿಗೆ ಮುಸ್ಲಿಮೇತರ ಸದಸ್ಯರ ನಾಮನಿರ್ದೇಶನಕ್ಕೆ ಅವಕಾಶ ನೀಡುವ ನಿಬಂಧನೆಗೆ ಪೀಠ ತಡೆ ನೀಡಿಲ್ಲ. ಆದರೆ, ವಕ್ಫ್ ಸಂಸ್ಥೆಗಳು ಬಹುತೇಕ ಮುಸ್ಲಿಂ ಸದಸ್ಯರನ್ನು ಹೊಂದಿರಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಕೇಂದ್ರ ವಕ್ಫ್ ಮಂಡಳಿಯಲ್ಲಿ 4ಕ್ಕಿಂತ ಹೆಚ್ಚು ಮುಸ್ಲಿಮೇತರ ಸದಸ್ಯರು ಇರಬಾರದು. ರಾಜ್ಯ ವಕ್ಫ್ ಮಂಡಳಿ 3ಕ್ಕಿಂತ ಹೆಚ್ಚು ಮುಸ್ಲಿಮೇತರ ಸದಸ್ಯರನ್ನು ಒಳಗೊಂಡಿರಬಾರದು ಎಂದು ನ್ಯಾಯಾಲಯ ತಿಳಿಸಿದೆ. ಅಲ್ಲದೆ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಸ್ಲಿಮರಾಗಿರಬೇಕು ಎಂದು ಪೀಠ ಹೇಳಿದೆ.
ವಕ್ಫ್ ತಿದ್ದುಪಡಿ ಕಾಯ್ದೆಗೆ ತಡೆ ನೀಡುವಂತೆ ಕೋರಿ, 100 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ಅದನ್ನು ಮುಸ್ಲಿಂ ಆಸ್ತಿಗಳನ್ನು ನಿಧಾನವಾಗಿ ಸ್ವಾಧೀನಕ್ಕೆ ತೆಗೆದುಕೊಳ್ಳುವ ನಿಟ್ಟಿನ ಕ್ರಮ ಎಂದು ಅರ್ಜಿಗಳಲ್ಲಿ ಆಕ್ಷೇಪಿಸಲಾಗಿತ್ತು.
ಆದರೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳ ಮೇಲಿನ ಅತಿಯಾದ ಆಕ್ರಮಣ ತಡೆಗೆ ಈ ಕ್ರಮ ಅಗತ್ಯ ಎಂದು ಸಮರ್ಥಿಸಿಕೊಂಡಿತ್ತು.
ಸೋಮವಾರ ಈ ಆದೇಶ ನೀಡುವು ಮೊದಲು, ವಕ್ಫ್ ತಿದ್ದುಪಡಿ ಕಾಯ್ದೆ ಪ್ರಶ್ನಿಸುವವರ ಪರ ವಕೀಲರು ಮತ್ತು ಕೇಂದ್ರವನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ವಾದಗಳನ್ನು ಸತತ ಮೂರು ದಿನ ಪೀಠ ಆಲಿಸಿತ್ತು.
ಎಐಎಂಐಎಂ ಸಂಸದ ಅಸದುದ್ದೀನ್ ಉವೈಸಿ, ದಿಲ್ಲಿ ಎಎಪಿ ಶಾಸಕ ಅಮಾನತುಲ್ಲಾ ಖಾನ್, APCR, ಜಮಿಯತ್ ಉಲೇಮಾ-ಇ-ಹಿಂದ್ ಅಧ್ಯಕ್ಷ ಅರ್ಷದ್ ಮದನಿ, ಸಮಸ್ತ ಕೇರಳ ಜಮಿಯತ್ ಉಲೇಮಾ, ಅಂಜುಮ್ ಖಾದ್ರಿ , ತೈಯಬ್ ಖಾನ್ ಸಲ್ಮಾನಿ, ಮುಹಮ್ಮದ್ ಶಫಿ, ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾಪ್ ಗಢಿ, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್, ಆರ್‌ಜೆಡಿ ಸಂಸದ ಮನೋಜ್ ಕುಮಾರ್ ಝಾ, ಎಸ್‌ಪಿ ಸಂಸದ ಜಿಯಾ ಉರ್ ರೆಹಮಾನ್ ಮೊದಲಾದವರು ವಕ್ಫ್ ತಿದ್ದುಪಡಿಗಳ ವಿರುದ್ಧ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಎರಡು ನಿಬಂಧನೆಗಳಿಗೆ ತಡೆ ನೀಡಲಾದ ಕ್ರಮವನ್ನು ಈದ್ಗಾ ಇಮಾಮ್ ಮತ್ತು ಎಐಎಂಪಿಎಲ್‌ಬಿ ಸದಸ್ಯ ಮೌಲಾನಾ ಖಾಲಿದ್ ರಶೀದ್ ಫರಂಗಿ ಮಹಾಲಿ ಸ್ವಾಗತಿಸಿದ್ದಾರೆ. ಆದರೆ ನಾವು ಇಡೀ ಮಸೂದೆಗೆ ತಡೆಯನ್ನು ನಿರೀಕ್ಷಿಸಿದ್ದೆವು. ಮುಂದೆ ನಮಗೆ ಸಂಪೂರ್ಣ ನಿರಾಳತೆ ಸಿಗುವ ಭರವಸೆ ಇದೆ ಎಂದು ಹೇಳಿದ್ದಾರೆ
ಎಐಎಂಪಿಎಲ್‌ಬಿ ಸದಸ್ಯ ಸೈಯದ್ ಖಾಸಿಮ್ ರಸೂಲ್ ಇಲ್ಯಾಸ್ ಅವರು ಕೂಡ, ತೀರ್ಪಿನಿಂದ ತೃಪ್ತಿಯಾಗಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾಪ್ ಗಢಿ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದಾರೆ.
ಇದು ನಿಜಕ್ಕೂ ಒಳ್ಳೆಯ ನಿರ್ಧಾರ. ಸರ್ಕಾರದ ಪಿತೂರಿ ಮತ್ತು ಉದ್ದೇಶಗಳನ್ನು ಸುಪ್ರೀಂ ಕೋರ್ಟ್ ನಿಯಂತ್ರಿಸಿದೆ. ತಮ್ಮ ಭೂಮಿ ದಾನ ಮಾಡುವ ಜನರು ಸರ್ಕಾರ ತಮ್ಮ ಭೂಮಿ ಕಸಿದುಕೊಳ್ಳಲು ಪ್ರಯತ್ನಿಸುತ್ತದೆ ಎಂದು ಭಯಭೀತರಾಗಿದ್ದರು. ಇದು ಅವರಿಗೆ ಒಂದು ಪರಿಹಾರ ಎಂದು ಅವರು ಹೇಳಿದ್ದಾರೆ.