×
Ad

ಬಿಹಾರ್ ಜಾತಿ ಗಣತಿ ತಡೆಗೆ ಸುಪ್ರೀಂ ನಕಾರ

Update: 2023-08-21 22:30 IST

 ಸುಪ್ರೀಂ ಕೋರ್ಟ್ | Photo: PTI 

ಹೊಸದಿಲ್ಲಿ: ಬಿಹಾರ ಸರಕಾರದ ಜಾತಿ ಗಣತಿಗೆ ಅನುಮತಿ ನೀಡಿರುವ ಪಾಟ್ನಾ ಹೈಕೋರ್ಟ್‌ನ ತೀರ್ಪಿಗೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ತಿಳಿಸಿದೆ.

ಜಾತಿ ಗಣತಿ ವಿರುದ್ಧ ಮೇಲ್ನೋಟಕ್ಕೆ ಸೂಕ್ತವೆನಿಸಬಹುದಾದ ಬಲವಾದ ಆಧಾರಗಳನ್ನು ನೀಡದ ಹೊರತು, ಅದಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂದು ಅದು ಹೇಳಿದೆ.

ಕೇಂದ್ರ ಸರಕಾರವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಜಾತಿ ಗಣತಿಯಿಂದ ಪ್ರತಿಕೂಲ ಉಂಟಾಗಬಹುದೆಂದು ತಿಳಿಸಿದರು. ಅನಂತರ ಸುಪ್ರೀಂ ಕೋರ್ಟ್, ಈ ವಿಷಯದ ಕುರಿತು ೭ ದಿನಗಳ ಒಳಗೆ ಪ್ರತಿಕ್ರಿಯೆ ಸಲ್ಲಿಸಲು ತುಷಾರ್ ಮೆಹ್ತಾ ಅವರಿಗೆ ಅವಕಾಶ ನೀಡಿತು.

‘‘ನಾವು ಅತ್ತವೂ ಇಲ್ಲ, ಇತ್ತವೂ ಇಲ್ಲ. ಆದರೆ, ಈ ಜಾತಿ ಗಣತಿಯಿಂದ ಕೆಲವು ಪ್ರತಿಕೂಲ ಪರಿಣಾಮ ಉಂಟಾಗಬಹುದು. ಆದುದರಿಂದ ನಾವು ನಮ್ಮ ಪ್ರತಿಕ್ರಿಯೆ ನೀಡಲು ಬಯಸುತ್ತೇವೆ’’ ಎಂದು ಮೆಹ್ತಾ ಹೇಳಿದರು.

ಪಾಟ್ನಾ ಉಚ್ಚ ನ್ಯಾಯಾಲಯ ಆಗಸ್ಟ್ ೧ರಂದು ನೀಡಿದ ತೀರ್ಪು ಪ್ರಶ್ನಿಸಿ ವಿವಿಧ ಸರಕಾರೇತರ ಸಂಸ್ಥೆಗಳು ಹಾಗೂ ವ್ಯಕ್ತಿಗಳು ಸಲ್ಲಿಸಿದ ಮನವಿಗಳ ಗುಚ್ಛವನ್ನು ನ್ಯಾಯಮೂರ್ತಿ ಸಂಜೀವ್ ಖನ್ನನ್ ಹಾಗೂ ಎಸ್.ವಿ.ಎನ್. ಭಟ್ಟಿ ಅವರನ್ನು ಒಳಗೊಂಡ ಪೀಠ ವಿಚಾರಣೆ ನಡೆಸಿತು. ಅನಂತರ ಮೆಹ್ತಾ ಅವರ ಮನವಿಯ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡಿತು.

ದೂರುದಾರರಲ್ಲಿ ಓರ್ವರ ಪರವಾಗಿ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಮುಕುಲ್ ರೋಹ್ಟಗಿ ಬಿಹಾರ್ ಸರಕಾರ ಅಂಕಿ-ಅಂಶ ಪ್ರಕಟಿಸುವುದನ್ನು ತಡೆಯಲು ನಿರ್ದೇಶನ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು.

‘‘ನೀವು ನೋಡಿ, ಇಲ್ಲಿ ಎರಡು ವಿಷಯಗಳಿವೆ. ಒಂದು ದತ್ತಾಂಶ ಸಂಗ್ರಹ. ಈ ಕಾರ್ಯ ಮುಗಿದಿದೆ. ಎರಡನೆಯದ್ದು ಸಮೀಕ್ಷೆಯ ಸಂದರ್ಭ ಸಂಗ್ರಹಿಸಲಾದ ದತ್ತಾಂಶಗಳ ವಿಶ್ಲೇಷಣೆ. ಎರಡನೆಯ ಭಾಗ ಹೆಚ್ಚು ಕಷ್ಟಕರ ಹಾಗೂ ಸಮಸ್ಯಾತ್ಮಕ. ನೀವು (ದೂರುದಾರರು) ಮೇಲ್ನೋಟಕ್ಕೆ ಸೂಕ್ತವೆನಿಸಬಹುದಾದ ಬಲವಾದ ಕಾರಣಗಳನ್ನು ನೀಡದೇ ಇದ್ದರೆ, ಜಾತಿ ಗಣತಿಗೆ ತಡೆ ನೀಡುವುದಿಲ್ಲ’’ ಎಂದು ಪೀಠ ಹೇಳಿತು.

ದತ್ತಾಂಶವನ್ನು ಪ್ರಕಟಿಸುವುದಿಲ್ಲ ಎಂದು ಬಿಹಾರ್ ಸರಕಾರ ಕಳೆದ ವಿಚಾರಣೆಯ ಸಂದರ್ಭ ಭರವಸೆ ನೀಡಿದೆ ಎಂದು ಪೀಠ ತಿಳಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News