×
Ad

ಮಹಾರಾಷ್ಟ್ರ ಚುನಾವಣೆಗಳ ತಪ್ಪು ವಿಶ್ಲೇಷಣೆ: ಚುನಾವಣಾ ತಜ್ಞ ಸಂಜಯ್‌ ಕುಮಾರ್ ವಿರುದ್ಧದ ಎಫ್‌ಐಆರ್‌ಗಳಿಗೆ ಸುಪ್ರೀಂ ತಡೆ

Update: 2025-08-25 15:35 IST

ಪ್ರೊ.‌ ಸಂಜಯ್ ಕುಮಾರ್ (Photo credit: NDTV)

ಹೊಸದಿಲ್ಲಿ: ಸರ್ವೋಚ್ಚ ನ್ಯಾಯಾಲಯವು 2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳ ತಪ್ಪು ವಿಶ್ಲೇಷಣೆಯನ್ನು ಒಳಗೊಂಡಿದ್ದ ಟ್ವೀಟ್‌ಗೆ ಸಂಬಂಧಿಸಿದಂತೆ ಚುನಾವಣಾ ತಜ್ಞ ಹಾಗೂ ʼಸೆಂಟರ್ ಫಾರ್ ದಿ ಸ್ಟಡೀಸ್ ಆಫ್ ಡೆವಲಪಿಂಗ್ ಸೊಸೈಟಿಸ್ʼ(ಸಿಎಸ್‌ಡಿಎಸ್)ನ ಸಹ ನಿರ್ದೇಶಕ ಪ್ರೊ.‌ ಸಂಜಯ್ ಕುಮಾರ್ ವಿರುದ್ಧ ಮಹಾರಾಷ್ಟ್ರ ಪೋಲಿಸರು ದಾಖಲಿಸಿರುವ ಎಫ್‌ಐಆರ್‌ಗಳಲ್ಲಿ ವಿಚಾರಣೆಗಳಿಗೆ ಸೋಮವಾರ ತಡೆ ನೀಡಿದೆ.

ಮಧ್ಯಂತರ ಆದೇಶವನ್ನು ಹೊರಡಿಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾ.ಎನ್.ವಿ.ಅಂಜಾರಿಯಾ ಅವರ ಪೀಠವು ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ಕುಮಾರ್ ಸಲ್ಲಿಸಿರುವ ರಿಟ್ ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್‌ನ್ನೂ ಹೊರಡಿಸಿತು.

ಆ.17ರಂದು ಕುಮಾರ್ ತನ್ನ ಎಕ್ಸ್ ಹ್ಯಾಂಡಲ್‌ನಲ್ಲಿ ನಿರ್ದಿಷ್ಟ ಕ್ಷೇತ್ರಗಳಲ್ಲಿ ಮತದಾರರ ಸಂಖ್ಯೆಯಲ್ಲಿ ಏರಿಕೆ ಮತ್ತು ಇಳಿಕೆಯ ಬಗ್ಗೆ ಪೋಸ್ಟ್ ಮಾಡಿದ್ದರು. ಆದಾಗ್ಯೂ ಪೋಸ್ಟ್ ತಪ್ಪು ವಿಶ್ಲೇಷಣೆಯನ್ನು ಆಧರಿಸಿದೆ ಎನ್ನುವುದು ಅರಿವಿಗೆ ಬಂದ ಬಳಿಕ ಅವರು ಆ.19ರಂದು ತನ್ನ ಪೋಸ್ಟ್‌ಗೆ ಕ್ಷಮೆ ಯಾಚಿಸಿದ್ದರು ಮತ್ತು ಅದು ತಪ್ಪಾಗಿತ್ತು ಎಂದು ಸ್ಪಷ್ಟಪಡಿಸಿದ್ದರು.

ಬಳಿಕ ಚುನಾವಣಾ ಆಯೋಗದಡಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಕುಮಾರ್ ವಿರುದ್ಧ ನಾಸಿಕ್ ಮತ್ತು ನಾಗ್ಪುರಗಳಲ್ಲಿ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದರು.

ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದ ಕುಮಾರ್,ತನ್ನ ವಿರುದ್ಧದ ಆರೋಪಗಳು ಆಧಾರರಹಿತವಾಗಿವೆ ಮತ್ತು ಎಫ್‌ಐಆರ್‌ಗಳು ಸರಕಾರದ ಅಧಿಕಾರದ ದುರುಪಯೋಗ ಎಂದು ವಾದಿಸಿದ್ದರು.

ಪೋಸ್ಟ್ ಪ್ರಾಮಾಣಿಕವಾಗಿತ್ತು ಮತ್ತು ಅದರಲ್ಲಿನ ತಪ್ಪು ಅನುದ್ದಿಷ್ಟವಾಗಿತ್ತು,ಹೀಗಾಗಿ ಯಾವುದೇ ಕ್ರಿಮಿನಲ್ ಉದ್ದೇಶವನ್ನು ಹೊಂದಿರಲಿಲ್ಲ. ಇದಕ್ಕಾಗಿ ತಾನು ಬಹಿರಂಗವಾಗಿ ಕ್ಷಮೆ ಯಾಚಿಸಿದ್ದೇನೆ ಮತ್ತು ಸ್ಪಷ್ಟನೆಯನ್ನೂ ನೀಡಿದ್ದೇನೆ ಎಂದು ಕುಮಾರ್ ವಾದಿಸಿದ್ದರು.

ತಕ್ಷಣವೇ ಸರಿಪಡಿಸಲಾಗಿದ್ದ ಕೇವಲ ತಾಂತ್ರಿಕ ದೋಷಕ್ಕಾಗಿ ಅಧಿಕಾರಿಗಳು ಗೌರವಾನ್ವಿತ ಪ್ರೊಫೆಸರ್ ಮತ್ತು ಸಾರ್ವಜನಿಕ ಬುದ್ಧಿಜೀವಿಯ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಇಂತಹ ಕ್ರಮಗಳು ನ್ಯಾಯಪರತೆ ಮತ್ತು ಸಹಜ ನ್ಯಾಯದ ಮೂಲಭೂತ ತತ್ವಗಳನ್ನು ಉಲ್ಲಂಘಿಸುತ್ತವೆ ಹಾಗೂ ವಾಕ್ ಸ್ವಾತಂತ್ರ್ಯದ ಬಳಕೆಯ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತವೆ ಎಂದೂ ಕುಮಾರ್ ಪ್ರತಿಪಾದಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News