×
Ad

‘ಆಪರೇಷನ್ ಸಿಂಧೂರ’ದಲ್ಲಿ ಪಾತ್ರ ವಹಿಸಿದ್ದ ಐಎಎಫ್ ಅಧಿಕಾರಿಯ ಬಿಡುಗಡೆಗೆ ಸುಪ್ರೀಂ ಕೋರ್ಟ್ ತಡೆ

Update: 2025-05-23 21:36 IST

ಸುಪ್ರೀಂ ಕೋರ್ಟ್ | PTI 

ಹೊಸದಿಲ್ಲಿ: ‘ಆಪರೇಷನ್ ಸಿಂಧೂರ’ದ ಭಾಗವಾಗಿದ್ದ ಭಾರತೀಯ ವಾಯುಪಡೆಯ ಮಹಿಳಾ ಶಾರ್ಟ್ ಸರ್ವಿಸ್ ಕಮಿಷನ್(10 ವರ್ಷಗಳ ಸೇವಾವಧಿ) ಅಧಿಕಾರಿಯನ್ನು ಸೇವೆಯಿಂದ ಬಿಡುಗಡೆಗೊಳಿಸುವುದಕ್ಕೆ ಸರ್ವೋಚ್ಚ ನ್ಯಾಯಾಲಯವು ತಡೆಯನ್ನು ನೀಡಿದೆ. 10 ವರ್ಷಗಳ ಸೇವೆಯ ಬಳಿಕ ತಮ್ಮನ್ನು ಮರು ನೇಮಿಸಿಕೊಳ್ಳಲಾಗುತ್ತದೆಯೇ ಎಂಬ ಬಗ್ಗೆ ಸಶಸ್ತ್ರ ಪಡೆಗಳ ಅಧಿಕಾರಿಗಳಲ್ಲಿ ಅನಿಶ್ಚಿತತೆಯು ಒಳ್ಳೆಯದಲ್ಲ ಮತ್ತು ಸೂಕ್ತ ನೀತಿಯೊಂದನ್ನು ರೂಪಿಸುವ ಮೂಲಕ ಅದನ್ನು ನಿವಾರಿಸಬೇಕು ಎಂದು ನ್ಯಾಯಾಲಯವು ಅಭಿಪ್ರಾಯವನ್ನು ವ್ಯಕ್ತಪಡಿಸಿತು.

ವಿಂಗ್ ಕಮಾಂಡರ್ ನಿಕೇತಾ ಪಾಂಡೆ ಅವರು ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಗುರುವಾರ ಕೈಗೆತ್ತಿಕೊಂಡಿತ್ತು. 2011ರಲ್ಲಿ ಶಾರ್ಟ್ ಸರ್ವಿಸ್ ಕಮಿಷನ್(ಎಸ್‌ಎಸ್‌ಸಿ) ಮೂಲಕ ಭಾರತೀಯ ವಾಯುಪಡೆಯನ್ನು ಸೇರಿದ್ದ ಪಾಂಡೆ 10 ವರ್ಷಗಳ ಸೇವಾವಧಿ ಪೂರ್ಣಗೊಂಡ ಬಳಿಕ ತನ್ನ ಅರ್ಹತೆಯಿಂದಾಗಿ 2025 ಜೂ.19ರವರೆಗೆ ಸೇವಾ ವಿಸ್ತರಣೆಯನ್ನು ಪಡೆದಿದ್ದರು. ಇತ್ತೀಚಿನ ಆಪರೇಷನ್ ಸಿಂಧೂರ ಮತ್ತು ಆಪರೇಷನ್ ಬಾಲಾಕೋಟ್‌ನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿರುವ ಪಾಂಡೆ ವಿಶೇಷ ಆಯ್ಕೆ ಮಂಡಳಿಯು ಪರ್ಮನಂಟ್ ಕಮಿಷನ್(ನಿವೃತ್ತಿ ವಯಸ್ಸಿನವರೆಗೆ ಸೇವಾವಧಿ)ಗಾಗಿ ತನ್ನ ಪ್ರಕರಣವನ್ನು ಪರಿಗಣಿಸುವವರೆಗೆ ಐಎಎಫ್‌ನಿಂದ ತನ್ನ ಬಿಡುಗಡೆಗೆ ತಡೆಯನ್ನು ಕೋರಿದ್ದರು.

ಪಾಂಡೆ ಐಎಎಫ್‌ನಿಂದ ಬಿಡುಗಡೆಗೆ ತಡೆಯಾಜ್ಞೆ ಪಡೆದುಕೊಂಡಿರುವ ಮೊದಲ ಎಸ್‌ಎಸ್‌ಸಿ ಅಧಿಕಾರಿಯಾಗಿದ್ದಾರೆ, ಮೇ 9ರಂದು ಸರ್ವೋಚ್ಚ ನ್ಯಾಯಾಲಯವು ಪರ್ಮನಂಟ್ ಕಮಿಷನ್‌ಗೆ ಪರಿಗಣಿಸಬೇಕಿದ್ದ ಸೇನೆಯ 50ಕ್ಕೂ ಅಧಿಕ ಮಹಿಳಾ ಎಸ್‌ಎಸ್‌ಸಿ ಅಧಿಕಾರಿಗಳ ಬಿಡುಗಡೆಗೆ ತಡೆಯಾಜ್ಞೆಯನ್ನು ನೀಡಿತ್ತು.

ಈ ಅಧಿಕಾರಿಗಳು ದೇಶದ ಪ್ರಮುಖ ಆಸ್ತಿಯಾಗಿದ್ದಾರೆ ಎಂದು ಬೆಟ್ಟು ಮಾಡಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ ಮತ್ತು ಎನ್.ಕೋಟೀಶ್ವರ ಸಿಂಗ್ ಅವರ ಪೀಠವು,ಎಸ್‌ಎಸ್‌ಸಿ ಮೂಲಕ ಆಯ್ಕೆಯಾದ ಎಲ್ಲ ಅಧಿಕಾರಿಗಳು ಅಗತ್ಯ ಮಾನದಂಡಗಳನ್ನು ಪೂರೈಸಿದರೆ ಪರ್ಮನಂಟ್ ಕಮಿಷನ್ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರವು ನೀತಿಯೊಂದನ್ನು ರೂಪಿಸಲು ಏಕೆ ಸಾಧ್ಯವಿಲ್ಲ ಎಂದು ಅಚ್ಚರಿಯನ್ನು ವ್ಯಕ್ತಪಡಿಸಿತು.

ಸಶಸ್ತ್ರ ಪಡೆಗಳಲ್ಲಿ ಅನಿಶ್ಚಿತತೆಯ ಭಾವನೆ ಒಳ್ಳೆಯದಲ್ಲದಿರಬಹುದು. ಮಹಿಳಾ ಎಸ್‌ಎಸ್‌ಸಿ ಅಧಿಕಾರಿಗಳಿಗೆ ಪರ್ಮನಂಟ್ ಕಮಿಷನ್ ಅಥವಾ ಕಾಯಂ ಸೇವಾವಧಿಯನ್ನು ಪಡೆಯುವ ಖಚಿತ ಅವಕಾಶವಿಲ್ಲದ ಕಾರಣ 10 ವರ್ಷಗಳನ್ನು ಪೂರೈಸಿದ ಬಳಿಕ ಈ ಅಧಿಕಾರಿಗಳ ನಡುವೆ ಪರಸ್ಪರ ಪೈಪೋಟಿಯುಂಟಾಗುತ್ತದೆ ಎಂದೂ ಪೀಠವು ತಿಳಿಸಿತು.

ಕೇಂದ್ರ ಮತ್ತು ಐಎಎಫ್ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರು,ಪಡೆಗೆ ಯುವ ಅಧಿಕಾರಿಗಳ ಅಗತ್ಯವಿದೆ. 2020ರಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಬಳಿಕ ಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಪುರುಷ ಅಧಿಕಾರಿಗಳಿಗೆ ಸಮಾನವಾಗಿ ಕಾಯಂ ಸೇವಾವಧಿಯನ್ನು ಜಾರಿಗೆ ತರಲಾಗಿದೆ. ಆದರೆ ಐಎಎಫ್ ಒಂದು ದಶಕದ ಮೊದಲೇ ಇದನ್ನು ಅನುಷ್ಠಾನಗೊಳಿಸಿದೆ ಎಂದು ತಿಳಿಸಿದರು. ಎರಡು ಆಯ್ಕೆ ಮಂಡಳಿಗಳು ಪಾಂಡೆಯವರ ಪ್ರಕರಣವನ್ನು ಪರಿಶೀಲಿಸಿವೆ ಮತ್ತು ಪರ್ಮನಂಟ್ ಸರ್ವಿಸ್‌ಗೆ ಅವರು ಅರ್ಹರಲ್ಲ ಎಂದು ನಿರ್ಧರಿಸಿವೆ ಎಂದೂ ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಆಪರೇಷನ್ ಸಿಂಧೂರದ ಸ್ವಲ್ಪ ಮೊದಲು ತನ್ನ ಕಕ್ಷಿದಾರರ ಕಾರ್ಯತಂತ್ರ ಚಾಣಾಕ್ಷತೆ ಮತ್ತು ಅನುಭವವನ್ನು ಪರಿಗಣಿಸಿ ಸಂಘಟಿತ ವಾಯುದಾಳಿಗಳಲ್ಲಿ ನಿರ್ಣಾಯಕ ಪಾತ್ರವನ್ನು ಅವರಿಗೆ ವಹಿಸಲಾಗಿತ್ತು ಎಂದು ಪಾಂಡೆ ಪರ ವಕೀಲರು ನ್ಯಾಯಾಲಯಕ್ಕೆ ನಿವೇದಿಸಿಕೊಂಡರು.

ಪಾಂಡೆ ವಿಶೇಷ ಆಯ್ಕೆ ಮಂಡಳಿಯ ಮುಂದೆ ಹಾಜರಾಗಲು ಇನ್ನೂ ಒಂದು ಅವಕಾಶವನ್ನು ಹೊಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News