×
Ad

ರೇಬಿಸ್ ಪ್ರಕರಣಗಳು, ಬೀದಿನಾಯಿ ಕಡಿತದಿಂದ ಸಾವುಗಳು: ಸ್ವಯಂಪ್ರೇರಿತ ವಿಚಾರಣೆಗೆ ಮುಂದಾದ ಸುಪ್ರೀಂ ಕೋರ್ಟ್

Update: 2025-07-28 15:53 IST

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಬೀದಿನಾಯಿ ಕಡಿತಗಳ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ದೇಶಾದ್ಯಂತ ವ್ಯಕ್ತವಾಗುತ್ತಿರುವ ಆಕ್ರೋಶದ ನಡುವೆ ದಿಲ್ಲಿಯಲ್ಲಿ ಈ ಪಿಡುಗಿಗೆ ಬಲಿಯಾಗುತ್ತಿರುವ ಶಿಶುಗಳ ಕುರಿತು ಮಾಧ್ಯಮ ವರದಿಯೊಂದನ್ನು ಸೋಮವಾರ ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡಿರುವ ಸರ್ವೋಚ್ಚ ನ್ಯಾಯಾಲಯವು ಈ ಬಗ್ಗೆ ವಿಚಾರಣೆಗೆ ಮುಂದಾಗಿದೆ.

ಇದನ್ನು ‘ಅತ್ಯಂತ ಆತಂಕಕಾರಿ’ ಎಂದು ಬಣ್ಣಿಸಿದ ನ್ಯಾ.ಆರ್.ಮಹಾದೇವನ್ ಅವರನ್ನೂ ಒಳಗೊಂಡಿದ್ದ ಪೀಠದ ನೇತೃತ್ವ ವಹಿಸಿದ್ದ ನ್ಯಾ.ಜೆ.ಬಿ.ಪರ್ದಿವಾಲಾ ಅವರು, ಮಾಧ್ಯಮ ವರದಿಯು ಆತಂಕಕಾರಿ ಮತ್ತು ಕಳವಳಕಾರಿ ವಿಷಯಗಳನ್ನು ಒಳಗೊಂಡಿದೆ ಎಂದು ಹೇಳಿದರು.

‘ನಾವಿದನ್ನು ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡಿದ್ದೇವೆ’ ಎಂದು ಹೇಳಿದ ಪೀಠವು,ದೂರನ್ನು ನೋಂದಾಯಿಸಿಕೊಳ್ಳುವಂತೆ ಮತ್ತು ಅದನ್ನು ಸ್ವಯಂಪ್ರೇರಿತ ಎಂದು ದಾಖಲಿಸಿಕೊಳ್ಳುವಂತೆ ಸರ್ವೋಚ್ಚ ನ್ಯಾಯಾಲಯದ ರಿಜಿಸ್ಟ್ರಿಗೆ ನಿರ್ದೇಶನ ನೀಡಿತು.

ನಗರಗಳು ಮತ್ತು ಅವುಗಳ ಹೊರವಲಯಗಳಲ್ಲಿ ವರದಿಯಾಗಿರುವ ನೂರಾರು ನಾಯಿ ಕಡಿತಗಳು ರೇಬಿಸ್‌ಗೆ ಕಾರಣವಾಗುತ್ತಿವೆ ಮತ್ತು ಅಂತಿಮವಾಗಿ ಮಕ್ಕಳು ಹಾಗೂ ವೃದ್ಧರು ಈ ಭೀಕರ ಕಾಯಿಲೆಗೆ ಬಲಿಯಾಗುತ್ತಿದ್ದಾರೆ ಎಂದು ‘ನಗರದಲ್ಲಿ ಬೀದಿನಾಯಿಗಳ ಕಾಟ:ಬೆಲೆ ತೆರುತ್ತಿರುವ ಮಕ್ಕಳು’ ಎಂಬ ಶೀರ್ಷಿಕೆಯ ಮಾಧ್ಯಮ ವರದಿಯನ್ನು ಉಲ್ಲೇಖಿಸಿ ನ್ಯಾಯಾಲಯವು ಕಳವಳವನ್ನು ವ್ಯಕ್ತಪಡಿಸಿತು.

ಸೂಕ್ತ ಆದೇಶಗಳಿಗಾಗಿ ಈ ವಿಷಯವನ್ನು ಮಾಧ್ಯಮ ವರದಿಯೊಂದಿಗೆ ಭಾರತದ ಮುಖ್ಯ ನ್ಯಾಯಾಧೀಶ ಬಿ.ಆರ್.ಗವಾಯಿ ಅವರ ಮುಂದಿರಿಸುವಂತೆಯೂ ಪೀಠವು ರಿಜಿಸ್ಟ್ರಿಗೆ ಆದೇಶಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News