ಪಂಜಾಬ್ | ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತದಿಂದ ಶಸ್ತ್ರಚಿಕಿತ್ಸೆ ಅರ್ಧಕ್ಕೆ ಸ್ಥಗಿತ!
Photo | NDTV
ಚಂಡೀಗಢ: ಪಂಜಾಬ್ ನ ಪಟಿಯಾಲಾದಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸುವಾಗ ವಿದ್ಯುತ್ ಕಡಿತಗೊಂಡಿದ್ದು, ವೈದ್ಯರು ಶಸ್ತ್ರಚಿಕಿತ್ಸೆಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿ ವಿದ್ಯುತ್ ಗಾಗಿ ಕಾದು ನಿಂತಿರುವ ವೀಡಿಯೊ ವೈರಲ್ ಆಗಿದೆ.
ಪಟಿಯಾಲಾದ ರಾಜೀಂದ್ರ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ವಿದ್ಯುತ್ ಕಡಿತಗೊಂಡ ಬಳಿಕ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದ ವೈದ್ಯರು ಮತ್ತು ಸಿಬ್ಬಂದಿ ರೋಗಿಯ ಸುತ್ತಲೂ ನಿಂತುಕೊಂಡು ವಿದ್ಯುತ್ ಮತ್ತೆ ಬರಲು ಕಾಯುತ್ತಿರುವುದು ಕಂಡು ಬಂದಿದೆ.
ವೈದ್ಯರಲ್ಲಿ ಓರ್ವರು ಈ ಕುರಿತ ವೀಡಿಯೊವನ್ನು ಚಿತ್ರೀಕರಿಸಿದ್ದು, ರೋಗಿಯ ಯೋಗಕ್ಷೇಮದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. 56 ಸೆಕೆಂಡ್ ಗಳ ವೀಡಿಯೊ ಕ್ಲಿಪ್ ನಲ್ಲಿ, ಆಫರೇಶನ್ ಥಿಯೇಟರ್ ನಲ್ಲಿರುವ ವೈದ್ಯರು, ʼಇಂತಹ ವಿದ್ಯುತ್ ಕಡಿತದ ಪ್ರಕರಣಗಳು ಆಸ್ಪತ್ರೆಯಲ್ಲಿ ಮರುಕಳಿಸುತ್ತಿವೆ, ಇದು ಮೊದಲಲ್ಲ, ವಿದ್ಯುತ್ ಸ್ಥಗಿತಗೊಂಡು 15 ನಿಮಿಷಗಳು ಕಳೆದಿವೆ, ವೆಂಟಿಲೇಟರ್ ಸಹ ಸ್ಥಗಿತಗೊಂಡಿದೆ, ರೋಗಿಗೆ ಏನಾದರೂ ಸಂಭವಿಸಿದರೆ, ಇದಕ್ಕೆ ಯಾರು ಹೊಣೆ? ಎಲ್ಲಾ ಸಿಬ್ಬಂದಿ ಇಲ್ಲಿ ನಿಂತಿದ್ದಾರೆ, ವೆಂಟಿಲೇಟರ್ ಆಫ್ ಆಗಿದೆʼ ಎಂದು ಹೇಳುವುದು ಕಂಡು ಬಂದಿದೆ. ಆದರೆ ಈ ವೀಡಿಯೊ ಯಾವಾಗ ಚಿತ್ರೀಕರಿಸಲ್ಪಟ್ಟಿದೆ ಎಂದು ತಕ್ಷಣ ಖಚಿತಪಡಿಸಲು ಸಾಧ್ಯವಾಗಲಿಲ್ಲ ಎಂದು NDTV ವರದಿ ಮಾಡಿದೆ.
ಪಂಜಾಬ್ ನ ಆರೋಗ್ಯ ಸಚಿವ ಬಲ್ಬೀರ್ ಸಿಂಗ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಆಸ್ಪತ್ರೆಯಲ್ಲಿನ ಪವರ್ ಬ್ಯಾಕಪ್ ವ್ಯವಸ್ಥೆಗಳು ಸಮಸ್ಯೆಯಿಲ್ಲದೆ ಕಾರ್ಯನಿರ್ವಹಿಸುತ್ತಿವೆ. ವೈದ್ಯರು ಗಾಬರಿಗೊಂಡು ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಎಲ್ಲಾ ಸಮಯದಲ್ಲೂ ರೋಗಿಗಳ ಆರೈಕೆಯ ಮೇಲೆ ನಿಗಾವಹಿಸಬೇಕು ಎಂದು ಹೇಳಿದ್ದಾರೆ.