×
Ad

ಕರ್ನಾಟಕ ಕಾಂಗ್ರೆಸ್ ನಾಯಕತ್ವ ಬಿಕ್ಕಟ್ಟು: ʼಎಕ್ಸ್ʼ ನಲ್ಲಿ ಸುರ್ಜೇವಾಲ ಮತ್ತು ಮಾಳವಿಯಾ ವಾಕ್ಸಮರ

Update: 2025-07-12 12:37 IST

ರಣದೀಪ್ ಸುರ್ಜೇವಾಲ ಹಾಗೂ ಅಮಿತ್ ಮಾಳವಿಯಾ (Photo credit: PTI)

ಹೊಸದಿಲ್ಲಿ: ಕರ್ನಾಟಕ ಕಾಂಗ್ರೆಸ್‌ ನ ರಾಜಕೀಯ ಬೆಳವಣಿಗೆಗಳು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಇತ್ತೀಚಿನ ದಿಲ್ಲಿ ಭೇಟಿಯು ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರ ವಾಕ್ಸಮರಕ್ಕೆ ಕಾರಣವಾಗಿದೆ.

ಈ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ಹಾಗೂ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರ ನಡುವಿನ ಆರೋಪ-ಪ್ರತ್ಯಾರೋಪಗಳಿಗೆ ಎಕ್ಸ್ ಸಾಮಾಜಿಕ ಮಾಧ್ಯಮ ವೇದಿಕೆ ಸಾಕ್ಷಿಯಾಗಿದೆ.

ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅಮಿತ್ ಮಾಳವಿಯಾ, “ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭೇಟಿಗೆ ಅನುಮತಿ ನಿರಾಕರಿಸುವ ಮೂಲಕ, ಇತ್ತೀಚೆಗೆ ದಿಲ್ಲಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅವಮಾನಿಸಲಾಗಿದೆ” ಎಂದು ಆರೋಪಿಸಿದ್ದಾರೆ.

“ರಾಹುಲ್ ಗಾಂಧಿಯವರನ್ನು ಭೇಟಿ ಮಾಡಲೆಂದೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಷ್ಟ್ರ ರಾಜಧಾನಿ ದಿಲ್ಲಿಗೆ ಪ್ರಯಾಣ ಬೆಳೆಸಿದ್ದರು. ಆದರೆ, ಅವರು ಯಾವುದೇ ಭೇಟಿಯೇ ಇಲ್ಲದೆ ಬೆಂಗಳೂರಿಗೆ ಮರಳಿದ್ದಾರೆ” ಎಂದು ಅವರು ಟೀಕಿಸಿದ್ದಾರೆ. “ಈ ಹಿಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಅಂದಿನ ಕರ್ನಾಟಕ ಮುಖ್ಯಮಂತ್ರಿ ವೀರೇಂದ್ರ ಪಾಟೀಲರನ್ನೂ ವಜಾಗೊಳಿಸಿದ್ದರು. ಇದು ಕರ್ನಾಟಕದ ನಾಯಕರೊಬ್ಬರಿಗೆ ಮಾಡಿದ್ದ ಚಾರಿತ್ರಿಕ ಅವಮಾನವಾಗಿತ್ತು” ಎಂದೂ ಅವರು ಹೇಳಿದ್ದಾರೆ.

“ಸಿದ್ದರಾಮಯ್ಯ ತಮ್ಮ ವಿರುದ್ಧ ಎತ್ತಿ ಕಟ್ಟಲಾಗಿರುವ ಡಿ.ಕೆ.ಶಿವಕುಮಾರ್ ಹಿಂದೆ ಅಡಗಿಕೊಳ್ಳಬೇಕಾದ ಅನಿವಾರ್ಯತೆಗೊಳಗಾಗಿದ್ದಾರೆ” ಎಂದೂ ಆರೋಪಿಸಿರುವ ಅಮಿತ್ ಮಾಳವಿಯಾ, ಕರ್ನಾಟಕ ಕಾಂಗ್ರೆಸ್ ಘಟಕದಲ್ಲಿ ಅಧಿಕಾರಕ್ಕಾಗಿ ಆಂತರಿಕ ಕಚ್ಚಾಟ ನಡೆಯುತ್ತಿದೆ ಎಂದೂ ದೂರಿದ್ದಾರೆ.

ಈ ಪೋಸ್ಟ್ ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲ, “ಅಮಿತ್ ಮಾಳವಿಯಾ ಸುಳ್ಳು ಪ್ರಚಾರ ನಡೆಸುತ್ತಿದ್ದಾರೆ” ಎಂದು ಆಪಾದಿಸಿ, ಅವರ ಆರೋಪಗಳಿಗೆ ವಿಸ್ತೃತ ತಿರುಗೇಟು ನೀಡಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸುರ್ಜೇವಾಲ, “ಅಮಿತ್ ಮಾಳವಿಯಾ ವಿಚಿತ್ರ ಹುಚ್ಚನಾಗಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಯೇ ಆಂತರಿಕ ಬಣ ಬಿಕ್ಕಟ್ಟು ಎದುರಿಸುತ್ತಿದೆ” ಎಂದು ತಿರುಗೇಟು ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯುಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕರ್ನಾಟಕದ ಸಮಸ್ಯೆಗಳನ್ನು ಬಗೆಹರಿಸುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಲು ದಿಲ್ಲಿಗೆ ಭೇಟಿ ನೀಡಿದ್ದರು ಎಂದು ಸ್ಪಷ್ಟಪಡಿಸಿರುವ ಸುರ್ಜೇವಾಲ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ನಿರಂತರವಾಗಿ ಕರ್ನಾಟಕದ ಬಗ್ಗೆ ಶತ್ರುತ್ವ ಭಾವನೆಯನ್ನು ಪ್ರದರ್ಶಿಸುತ್ತಿದೆ ಎಂದು ಪ್ರತಿ ಆರೋಪ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News