×
Ad

ಸಂತರ ಮೇಲಿನ ದೌರ್ಜನ್ಯ ತಡೆಗೆ ಕಾನೂನು ರಚಿಸಿ: ಅಮಿತ್ ಶಾಗೆ ಸ್ವಾಮೀಜಿಗಳ ನಿಯೋಗ ಮನವಿ

"ಧರ್ಮಸ್ಥಳದ ಧರ್ಮಾಧಿಕಾರಿಯವರ ಕುಟುಂಬದ ವಿರುದ್ಧದ ಬೆಳವಣಿಗೆಗಳು ಅತ್ಯಂತ ನೋವಿನ ಸಂಗತಿ"

Update: 2025-09-04 18:35 IST

ಹೊಸದಿಲ್ಲಿ : ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕುಟುಂಬದ ವಿರುದ್ಧ ನಡೆಯುತ್ತಿರುವ ಬೆಳವಣಿಗೆಯು ಅತ್ಯಂತ ನೋವಿನ ಮತ್ತು ಅಸಹನೀಯವಾಗಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಸನಾತನ ಸಂತರು, ಆಚಾರ್ಯರು ಹಾಗೂ ಸಮುದಾಯದ ಮುಖಂಡರು ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿದ್ದಾರೆ.

ದುಷ್ಕರ್ಮಿಗಳು ಮತ್ತು ರಾಷ್ಟ್ರವಿರೋಧಿ ಶಕ್ತಿಗಳು ಸನಾತನ ಮತ್ತು ಜೈನ ಧರ್ಮದ ತತ್ವಗಳ ಮೇಲೆ ಧೈರ್ಯ ಶಾಲಿಯಾಗಿ ದಾಳಿ ನಡೆಸಿರುವುದರಿಂದ, ಸರಕಾರವು ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಂಡು ನಿಜವಾದ ಅಪರಾಧಿಗಳನ್ನು ಪತ್ತೆಹಚ್ಚಿ, ಭವಿಷ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಶಿಕ್ಷೆ ವಿಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸನಾತನ ಧರ್ಮದ ಧಾರ್ಮಿಕ ಸಂಸ್ಥೆಗಳು ಮತ್ತು ಸಂತರ ಮೇಲಿನ ದೌರ್ಜನ್ಯ ಹಾಗೂ ಅವಹೇಳನವನ್ನು ತಡೆ ಗಟ್ಟಲು ತುರ್ತು ಕಾನೂನು ಜಾರಿಗೆ ತರಬೇಕು ಎಂದು ಸಂತರ ನಿಯೋಗ ಗೃಹ ಸಚಿವರಿಗೆ ಸಲ್ಲಿಸಿದ ಪತ್ರದಲ್ಲಿ ಒತ್ತಾಯಿಸಿದೆ.

ಪತ್ರದಲ್ಲಿ ಏನೇನಿದೆ ?

ತ್ಯಾಗ ಮತ್ತು ಅಹಿಂಸೆಗೆ ತಮ್ಮ ಜೀವನವನ್ನು ಮುಡಿಪಾಗಿರಿಸಿರುವ ಸಂತರು ಕಿರುಕುಳ ಮತ್ತು ಹಿಂಸೆಗೆ ಗುರಿಯಾ ಗುತ್ತಿರುವ ಬಗ್ಗೆ ಆತಂಕ ವ್ಯಕ್ತವಾಗಿದೆ. ಪಾಲ್ಘರ್‌ ನಲ್ಲಿ ನಡೆದ ಸ್ವಾಮೀಜಿಗಳ ಕೊಲೆ ಅಥವಾ ಬೆಳಗಾವಿಯಲ್ಲಿ ಆಚಾರ್ಯ ಶ್ರೀ ಕಾಮಕುಮಾರ ನಂದಿ ಮಹಾರಾಜರ ನಿಗೂಢ ಮರಣ ಇದಕ್ಕೆ ಉದಾಹರಣೆ ಎಂದು ಪತ್ರದಲ್ಲಿ ಹೇಳಲಾಗಿದೆ.

ದೇಶಾದ್ಯಂತ ದೇವಾಲಯಗಳು ಮತ್ತು ಯಾತ್ರಾ ಸ್ಥಳಗಳ ಅಪವಿತ್ರಗೊಳಿಸುವಿಕೆ, ವಿಗ್ರಹ ಧ್ವಂಸ ಮತ್ತು ದಾಳಿಗಳು ಪದೇ ಪದೇ ನಡೆಯುತ್ತಿದ್ದು, ಇವು ಕೇವಲ ಆಸ್ತಿಯ ವಿರುದ್ಧದ ಅಪರಾಧಗಳಲ್ಲ, ಸನಾತನ ಹಿಂದೂ ಮತ್ತು ಜೈನ ಸಮುದಾಯಗಳ ಆತ್ಮದ ಮೇಲಿನ ದಾಳಿಗಳಾಗಿವೆ ಎಂದು ಸಂತರು ಅಭಿಪ್ರಾಯಪಟ್ಟಿದ್ದಾರೆ.

ಡಿಜಿಟಲ್ ವೇದಿಕೆಗಳಲ್ಲಿಯೂ ನಿಂದನೆ ಹಾಗೂ ಮಾನಹಾನಿ ಪ್ರಕರಣಗಳು ಹೆಚ್ಚುತ್ತಿವೆ. ಕೆಲವು ಯೂಟ್ಯೂಬರ್‌ಗಳು, ವ್ಲಾಗರ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಪೂಜ್ಯ ಮುನಿಗಳು, ಆಚಾರ್ಯರು ಮತ್ತು ಸ್ವಾಮೀಜಿ ಗಳ ಬಗ್ಗೆ ಅವಹೇಳನಕಾರಿ ವೀಡಿಯೊಗಳು ಹಾಗೂ ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ. ಇಂತಹ ವಿಷಯವನ್ನು 24 ಗಂಟೆಗಳೊಳಗೆ ತೆಗೆದುಹಾಕುವಂತೆ ಕಾನೂನು ಬದ್ಧ ನಿಯಮಗಳನ್ನು ರೂಪಿಸುವಂತೆ ಮನವಿ ಮಾಡಲಾಗಿದೆ.

ಮುನಿಗಳು, ಸ್ವಾಮೀಜಿಗಳು, ಆಚಾರ್ಯರು ಹಾಗೂ ಸಮುದಾಯ ನಾಯಕರ ವಿರುದ್ಧ ಅವಮಾನ, ಕಿರುಕುಳ, ಹಿಂಸೆ ಮತ್ತು ಮಾನನಷ್ಟವನ್ನು ಅಪರಾಧೀಕರಿಸಲು, ದೇವಾಲಯಗಳು, ತೀರ್ಥಯಾತ್ರೆಯ ಸ್ಥಳಗಳು ಮತ್ತು ವಿಗ್ರಹಗಳನ್ನು ರಕ್ಷಿಸಲು, ಎಸ್ಸಿಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯ ಮಾದರಿಯಲ್ಲಿ ರಕ್ಷಣಾತ್ಮಕ ಕಾನೂನು ತರಬೇಕು ಎಂದು ಸಂತರು ಆಗ್ರಹಿಸಿದ್ದಾರೆ.

ಭವಿಷ್ಯದ ಪೀಳಿಗೆಯ ಸಂತರು ಮತ್ತು ಭಕ್ತರು ಭಯ, ಅವಮಾನ ಅಥವಾ ಅಸುರಕ್ಷತೆ ಇಲ್ಲದೆ ಸನಾತನ ಧರ್ಮ ವನ್ನು ಆಚರಿಸಲು ಹಾಗೂ ಸಂರಕ್ಷಿಸಲು ತುರ್ತು ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಲಾಗಿದೆ. ರಾಮ ಮಂದಿರ ನಿರ್ಮಾಣ ಮತ್ತು 370 ವಿಧಿ ರದ್ದತಿ ಮುಂತಾದ ಭರವಸೆಗಳನ್ನು ಈಡೇರಿಸಿದಂತೆ, ಈ ವಿಚಾರದಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಧರ್ಮವನ್ನು ಕಾಪಾಡಲಿದೆ ಎಂಬ ವಿಶ್ವಾಸವಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಸಂತರ ನಿಯೋಗದಲ್ಲಿ ಹರಿಹರ ಪಂಚಮ ಸಾಲಿ ಪೀಠದ ವಚನಾನಂದ ಸ್ವಾಮೀಜಿ, ಚಿತ್ರದುರ್ಗದ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಮಲೆ ಮಹದೇಶ್ವರ ಸಾಲೂರು ಬ್ರಹನ್ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಹೊಸದುರ್ಗ ಭಗೀರಥ ಗುರುಪೀಠದ ಪುರುಷೋತ್ತಮಾನಂದ ಸ್ವಾಮೀಜಿ, ಕಕಮರಿ ಗುರುದೇವ ಆಶ್ರಮದ ಆತ್ಮರಾಮ ಸ್ವಾಮೀಜಿ, ಮಂಗಳೂರಿನ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ವರೂರು ದಿಗಂಬರ ಜೈನಮಠದ ಧರ್ಮಸೇನ ಸ್ವಾಮೀಜಿ, ರಾಜಸ್ಥಾನದ ಜೈನಮಠದ ಸೌರಭಸೇನ ಸ್ವಾಮೀಜಿ ನಿಯೋಗದಲ್ಲಿ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News