×
Ad

26/11ರ ಭಯೋತ್ಪಾದಕ ದಾಳಿಗೆ ಮುನ್ನ ತಹವ್ವರ್ ರಾಣಾ ಮುಂಬೈ ಹೋಟೆಲ್ ನಲ್ಲಿ ತಂಗಿದ್ದ: ಪೊಲೀಸರ ಹೇಳಿಕೆ

Update: 2023-09-26 22:16 IST

ತಹವ್ವರ್ ಹುಸೇನ್ ರಾಣಾ| Photo: ANI 

ಮುಂಬೈ: 26/11ರ ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಪಾಕಿಸ್ತಾನ ಮೂಲದ ಕೆನಡಾದ ಉದ್ಯಮಿ ತಹವ್ವರ್ ಹುಸೇನ್ ರಾಣಾ ವಿರುದ್ಧ ಪೂರಕ ದೋಷಾರೋಪ ಪಟ್ಟಿಯನ್ನು ಸಲ್ಲಿಸಿರುವ ಪೊಲೀಸರು, ದಾಳಿಗೆ ಮುನ್ನ 2008 ನ.21ರವರೆಗೆ ಎರಡು ದಿನಗಳ ಕಾಲ ಆತ ಮುಂಬೈನ ಉಪನಗರ ಪೊವಾಯಿಯಲ್ಲಿಯ ಹೋಟೆಲ್ಲೊಂದರಲ್ಲಿ ಉಳಿದುಕೊಂಡಿದ್ದ ಎನ್ನುವುದನ್ನು ಉಲ್ಲೇಖಿಸಿದ್ದಾರೆ ಎಂದು ಅಧಿಕಾರಿಯೋರ್ವರು ತಿಳಿಸಿದರು.

ಮುಂಬೈ ಪೊಲೀಸ್ನ ಕ್ರೈಂ ಬ್ರಾಂಚ್ ಸೋಮವಾರ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಪ್ರಕರಣಗಳ ವಿಚಾರಣೆಯನ್ನು ನಡೆಸುತ್ತಿರುವ ವಿಶೇಷ ನ್ಯಾಯಾಲಯದಲ್ಲಿ 400ಕ್ಕೂ ಅಧಿಕ ಪುಟಗಳ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ. ಇದು ಪ್ರಕರಣದಲ್ಲಿ ನಾಲ್ಕನೇ ದೋಷಾರೋಪ ಪಟ್ಟಿಯಾಗಿದೆ.

ಪ್ರಸ್ತುತ ಅಮೆರಿಕದಲ್ಲಿ ಬಂಧನದಲ್ಲಿರುವ ರಾಣಾ ಮುಂಬೈ ದಾಳಿಗಳಲ್ಲಿ ತನ್ನ ಪಾತ್ರಕ್ಕಾಗಿ ಹಲವಾರು ಆರೋಪಗಳನ್ನು ಎದುರಿಸುತ್ತಿದ್ದು,26/11ರ ದಾಳಿಗಳ ಹಿಂದಿನ ಪ್ರಮುಖ ಸಂಚುಕೋರರಲ್ಲಿ ಒಬ್ಬನಾಗಿರುವ ಪಾಕಿಸ್ತಾನಿ-ಅಮೆರಿಕನ್ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿ ಜೊತೆ ಸಂಪರ್ಕದಲ್ಲಿದ್ದ ಎನ್ನುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

ರಾಣಾ 2008,ನ.11ರಂದು ಭಾರತಕ್ಕೆ ಆಗಮಿಸಿದ್ದು,ನ.21ರವರೆಗೆ ಇಲ್ಲಿಯೇ ಉಳಿದುಕೊಂಡಿದ್ದ. ಈ ಪೈಕಿ ಎರಡು ದಿನಗಳನ್ನು ಆತ ಪೊವಾಯಿಯ ರೆನೈಸನ್ಸ್ ಹೋಟೆಲ್ನಲ್ಲಿ ಕಳೆದಿದ್ದ ಎಂದು ಕ್ರೈಂ ಬ್ರಾಂಚ್ ನ ಹಿರಿಯ ಅಧಿಕಾರಿಯೋರ್ವರು ಮಂಗಳವಾರ ತಿಳಿಸಿದರು.

ರಾಣಾ ಹೆಡ್ಲಿ ಜೊತೆ ಸಂಚಿನಲ್ಲಿ ಶಾಮೀಲಾಗಿದ್ದ ಎನ್ನುವುದನ್ನು ಸಾಕ್ಷಗಳು ತೋರಿಸಿವೆ. ಆತ ನಕಲಿ ದಾಖಲೆಗಳ ಆಧಾರದಲ್ಲಿ ಭಾರತೀಯ ಪ್ರವಾಸಿ ವೀಸಾ ಪಡೆದುಕೊಳ್ಳಲು ಹೆಡ್ಲಿಗೆ ನೆರವಾಗಿದ್ದ. 26/11ರ ದಾಳಿಗಳನ್ನು ನಡೆಸಲು ಲಷ್ಕರೆ ತೈಬಾಕ್ಕೆ ಲಾಜಿಸ್ಟಿಕ್ ನೆರವನ್ನೂ ಆತ ಒದಗಿಸಿದ್ದ ಎಂದೂ ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News