ತಮಿಳುನಾಡು | ಎಂಬಿಸಿ ಮಹಿಳೆಯೊಂದಿಗೆ ಮಾತನಾಡಿದ್ದಕ್ಕೆ ಎಸ್‌ಸಿ ಯುವಕನ ಶಂಕಿತ ಮರ್ಯಾದಾ ಹತ್ಯೆ
ತಿರುನೆಲ್ವೆಲಿ,ಜು.28: ಅತ್ಯಂತ ಹಿಂದುಳಿದ ವರ್ಗ(ಎಂಬಿಸಿ)ಕ್ಕೆ ಸೇರಿದ ಮಹಿಳೆಯೊಂದಿಗೆ ಮಾತನಾಡಿದ ಆರೋಪದಲ್ಲಿ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಪರಿಶಿಷ್ಟ ಜಾತಿ(ಎಸ್‌ಸಿ)ಯ ಯುವಕನೋರ್ವನ್ನು ಕೊಚ್ಚಿ ಕೊಲೆಗೈದಿರುವ ಘಟನೆ ಇಲ್ಲಿ ನಡೆದಿದೆ. ಮಹಿಳೆಯ ಸೋದರ ಹಾಗು ಪೋಷಕರ ವಿರುದ್ಧ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಪೋಷಕರಿಬ್ಬರೂ ಪೋಲಿಸ್ ಸಬ್-ಇನ್ಸಪೆಕ್ಟರ್ ಗಳಾಗಿದ್ದಾರೆ. ಆರೋಪಿಗಳ ಪೈಕಿ ಎಸ್.ಸುರ್ಜಿತ್(21) ಎಂಬಾತನನ್ನು ಬಂಧಿಸಲಾಗಿದ್ದು, ವಿಚಾರಣೆಗೊಳಪಡಿಸಲಾಗಿದೆ.
ಹತ್ಯೆಯಾಗಿರುವ ಯುವಕನನ್ನು ತೂತ್ತುಕುಡಿ ಜಿಲ್ಲೆಯ ಆರ್ಮುಗಮಂಗಲಂ ನಿವಾಸಿ ಕವಿನ್ ಸೆಲ್ವಗಣೇಶ(27) ಎಂದು ಗುರುತಿಸಲಾಗಿದೆ. ಆರೋಪಿಗಳಾದ ಸರವಣನ್ ಮತ್ತು ಕೃಷ್ಣಕುಮಾರಿ ಇಬ್ಬರೂ ಪೋಲಿಸ್ ಸಿಬ್ಬಂದಿಗಳಾಗಿದ್ದು, ಅವರ ಪುತ್ರ ಸುರ್ಜಿತ್ ಮೇಲೆ ಕವಿನ್ ನನ್ನು ಹತ್ಯೆಗೈದ ಆರೋಪವನ್ನು ಹೊರಿಸಲಾಗಿದೆ. ಮೂವರೂ ತಿರುನೆಲ್ವೆಲಿಯ ಕೆಟಿಸಿ ನಗರ ನಿವಾಸಿಗಳಾಗಿದ್ದಾರೆ.
ಮೂಲಗಳ ಪ್ರಕಾರ ಕವಿನ್ ಮತ್ತು ಆರೋಪಿ ದಂಪತಿಯ ಪುತ್ರಿ ಶಾಲಾ ಸಹಪಾಠಿಗಳಾಗಿದ್ದರು. ಕವಿನ್ ಚೆನ್ನೈನ ಪ್ರಮುಖ ಐಟಿ ಕಂಪನಿಯೊಂದರ ಉದ್ಯೋಗಿಯಾಗಿದ್ದರೆ, ಮಹಿಳೆ ಕೆಟಿಸಿ ನಗರದ ಸಿದ್ಧ ಕ್ಲಿನಿಕ್‌ನಲ್ಲಿ ಸಲಹೆಗಾರಳಾಗಿ ಕೆಲಸ ಮಾಡುತ್ತಿದ್ದಾಳೆ. ಇಬ್ಬರೂ ಹಲವಾರು ವರ್ಷಗಳಿಂದ ಉತ್ತಮ ಸಂಬಂಧವನ್ನು ಹೊಂದಿದ್ದರು ಎಂದು ಹೇಳಲಾಗಿದೆ.
ಅವರಿಬ್ಬರ ನಡುವಿನ ಸಂಬಂಧ ಮದುವೆಗೆ ಕಾರಣವಾಗಬಹುದು ಎಂದು ಶಂಕಿಸಿದ್ದ ಮಹಿಳೆಯ ಪೋಷಕರು ಮತ್ತು ಸೋದರ ಆಕೆ ಕವಿನ್ ಜೊತೆ ಮಾತನಾಡುವುದನ್ನು ವಿರೋಧಿಸಿದ್ದರು ಹಾಗೂ ಕವಿನ್ ಮತ್ತು ಆತನ ತಮ್ಮನಿಗೆ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.
ರವಿವಾರ ಕವಿನ್ ತನ್ನ ಅಜ್ಜನ ಹದಗೆಡುತ್ತಿರುವ ಆರೋಗ್ಯ ಸ್ಥಿತಿಯ ಬಗ್ಗೆ ಮಹಿಳೆಯ ಸಲಹೆ ಪಡೆದುಕೊಳ್ಳಲು ಕೆಟಿಸಿ ನಗರಕ್ಕೆ ಬಂದಿದ್ದ. ಆತನನ್ನು ಸಂಪರ್ಕಿಸಿದ್ದ ಸುರ್ಜಿತ್ ತನ್ನ ಪೋಷಕರೊಂದಿಗೆ ಮಾತನಾಡಲು ಬರುವಂತೆ ಕೇಳಿಕೊಂಡಿದ್ದ. ಸುರ್ಜಿತ್ ನನ್ನು ನಂಬಿದ್ದ ಕವಿನ್ ಆತನ ದ್ವಿಚಕ್ರ ವಾಹನದಲ್ಲಿ ಆತನೊಂದಿಗೆ ಅಷ್ಟಲಕ್ಷ್ಮಿ ನಗರಕ್ಕೆ ತೆರಳಿದ್ದ.
ಆದರೆ ಸುರ್ಜಿತ್ ಬಚ್ಚಿಟ್ಟಿದ್ದ ಕುಡುಗೋಲನ್ನು ಹೊರತೆಗೆದು ಕವಿನ್ ಮೇಲೆ ದಾಳಿಯನ್ನು ಆರಂಭಿಸಿದ್ದ. ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ ಕವಿನ್ ನನ್ನು ಬೆನ್ನಟ್ಟಿ ಕೊಂದು ಹಾಕಿದ್ದಾನೆ.
ಎಸ್‌ಐ ದಂಪತಿ ಮತ್ತು ಸುರ್ಜಿತ್ ವಿರುದ್ಧ ಬಿಎನ್‌ಎಸ್ ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೋಲಿಸರು ರವಿವಾರ ಸುರ್ಜಿತ್‌ನನ್ನು ಬಂಧಿಸಿ ಸೋಮವಾರ ನ್ಯಾಯಾಲಯದಲ್ಲಿ ಹಾಜರು ಪಡಿಸಿದ್ದು,ಆ.14ರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ. ಪೋಲಿಸರು ಎಸ್‌ಐ ದಂಪತಿಯನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ.