×
Ad

ತಮಿಳುನಾಡು | ಡಿಎಂಕೆ ಪುರಸಭಾ ಸದಸ್ಯೆಯ ಕಾಲಿಗೆ ಬಿದ್ದು ನಮಸ್ಕರಿಸಿದ ಮುನ್ಸಿಪಲ್ ಅಧಿಕಾರಿ!

ವೀಡಿಯೊ ವೈರಲ್, ಪೊಲೀಸರಿಗೆ ದೂರು ನೀಡಿದ ಸಂತ್ರಸ್ತ

Update: 2025-09-03 22:16 IST

PC : X \ @annamalai_k

ಚೆನ್ನೈ,ಸೆ.3: ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿ ದಲಿತ ಸಮುದಾಯದ ಮುನ್ಸಿಪಲ್ ಅಧಿಕಾರಿಯೊಬ್ಬರು ಆಡಳಿತಾರೂಢ ಡಿಎಂಕೆ ಪಕ್ಷದ ಪುರಸಭಾ ಸದಸ್ಯೆಯೊಬ್ಬರ ಮುಂದೆ ನೆಲಕ್ಕೆ ಬಿದ್ದು ಸಾಷ್ಟಾಂಗ ನಮಸ್ಕಾರ ಮಾಡುತ್ತಿರುವ ಘಟನೆಯ ವೀಡಿಯೊವೊಂದು ವೈರಲ್ ಆಗಿದ್ದು, ರಾಜಕೀಯ ವಿವಾದದ ಕಿಡಿಯನ್ನು ಹೊತ್ತಿಸಿದೆ.

ಘಟನೆಗೆ ಸಂಬಂಧಿಸಿ ಪುರಸಭಾ ಅಧಿಕಾರಿಯು ಪೊಲೀಸರಿಗೆ ದೂರು ನೀಡಿದ್ದು, ತನ್ನನ್ನು ಅವಮಾನಿಸಲಾಗಿದೆಯೆಂದು ಆರೋಪಿಸಿದ್ದಾರೆ.

56 ಸೆಕೆಂಡ್‌ಗಳ ಈ ವೀಡಿಯೊದಲ್ಲಿ, ಕಿರಿಯ ಸಹಾಯಕ ಅಧಿಕಾರಿ ಮುನಿಯಪ್ಪನ್ ಅವರು ಪುರಸಭಾ ಸದಸ್ಯೆ ರಮ್ಯಾ ಅವರ ಪಾದಗಳಿಗೆ ಬಿದ್ದು ಸಾಷ್ಟಾಂಗ ನಮಸ್ಕಾರ ಮಾಡುತ್ತಿರುವುದು ಕಂಡುಬಂದಿದೆ. ಈ ಸಂದರ್ಭ ರಮ್ಯಾ ಅವರು ಇತರರೊಂದಿಗೆ ಮಾತುಕತೆ ನಡೆಸುತ್ತಿರುವುದು ವೀಡಿಯೊದಲ್ಲಿ ಕಾಣಿಸಿದೆ.

ವೀಡಿಯೊ ವೈರಲ್ ಆದ ಬಳಿಕ ಮುನಿಯಪ್ಪನ್ ಅವರು ತಾನು ಸ್ವ ಇಚ್ಛೆಯಿಂದ ಪುರಸಭಾ ಸದಸ್ಯೆಯ ಪಾದಗಳಿಗೆ ಬಿದ್ದು ನಮಸ್ಕರಿಸಿದ್ದಾಗಿ ಲಿಖಿತ ಹೇಳಿಕೆಯೊಂದನ್ನು ನೀಡಿದ್ದರು. ಆದರೆ ಅವರು ಮತ್ತೆ ಹೊಸತಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ, ಡಿಎಂಕೆ ಪುರಸಭಾ ಸದಸ್ಯೆಯು, ಆಕೆಯ ಕಾಲಿಗೆ ಬೀಳುವಂತೆ ತನಗೆ ಹೇಳಿದ್ದರೆಂದು ಆಪಾದಿಸಿದ್ದಾರೆ.

ಮುನಿಯಪ್ಪನ್ ಅವರ ದೂರನ್ನು ಸ್ವೀಕರಿಸಿರುವ ಪೊಲೀಸರು ರಮ್ಯ ಹಾಗೂ ಇತರ ಕೆಲವರ ವಿರುದ್ಧ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಆದರೆ ಈ ತನಕ ಯಾರನ್ನೂ ಬಂಧಿಸಿಲ್ಲವೆಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News