ತಮಿಳುನಾಡು | ಬಾರ್ಜ್‌ನ ಟ್ಯಾಂಕ್ ಸ್ವಚ್ಛಗೊಳಿಸಲು ಇಳಿದ ಮೂವರು ಕಾರ್ಮಿಕರು ಉಸಿರುಗಟ್ಟಿ ಮೃತ್ಯು
ಸಾಂದರ್ಭಿಕ ಚಿತ್ರ
ಚೆನ್ನೈ, ಸೆ. 19: ತಮಿಳುನಾಡನ ತೂತುಕುಡಿ ಜಿಲ್ಲೆಯ ಹಳೆ ಬಂದರಿನಲ್ಲಿ ನಿಲ್ಲಿಸಲಾಗಿದ್ದ ಬಾರ್ಜ್‌ನ ಸ್ಥಿರ ಭಾರ ಟ್ಯಾಂಕ್‌ನ ಒಳಗೆ ಬುಧವಾರ ಸ್ವಚ್ಛಗೊಳಿಸುತ್ತಿದ್ದ ಸಂದರ್ಭ ಮೂವರು ನೈರ್ಮಲ್ಯ ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಬಾರ್ಜ್‌ನ ಕೆಳ ಭಾಗದಲ್ಲಿ ಉತ್ಪತ್ತಿಯಾದ ವಿಷಾನಿಲ ಸೇವಿಸಿದ ಬಳಿಕ ಈ ಮೂವರು ಕುಸಿದು ಬಿದ್ದಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಮೃತಪಟ್ಟ ಕಾರ್ಮಿಕರನ್ನು ರಾಜಸ್ಥಾನದ ಸಂದೀಪ್ ಕುಮಾರ್ (25), ತೂತುಕ್ಕುಡಿಯ ಪುನ್ನಕಾಯಲ್‌ನ ಜೆನಿಸನ್ ಥಾಮಸ್ (35) ಹಾಗೂ ತಿರುನಲ್ವೇಲಿ ಜಿಲ್ಲೆಯ ಉವರಿಯ ಸಿರೋನ್ ಜಾರ್ಜ್ (25) ಎಂದು ಗುರುತಿಸಲಾಗಿದೆ.
ಮುಕ್ತಾ ಇನ್‌ಫ್ರಾ ಒಡೆತನದ ಬಾರ್ಜ್ ಶ್ರೀಲಂಕಾ, ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳಿಗೆ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸಲು ಹಳೆ ಬಂದರಿನಲ್ಲಿ ನಿಂತಿತ್ತು ಎಂದು ಹೇಳಲಾಗಿದೆ.
ನಿಂತ ನೀರಿನಿಂದಾಗಿ ವಿಷಾನಿಲ ಉತ್ಪತ್ತಿಯಾಗಿತ್ತು. ವಿಷಾನಿಲ ಹೊರ ಹೋಗಲು ಮುಂಚಿತವಾಗಿ ಒಂದು ಭಾಗವನ್ನು ತೆರೆಯಲಾಗಿತ್ತು. ಈ ನಡುವೆ ಮೂವರು ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಒಳಗೆ ಪ್ರವೇಶಿಸಿದ್ದಾರೆ ಎಂದು ಹೇಳಲಾಗಿದೆ. ಈ ಕೆಲಸಕ್ಕೆ ನಿಯೋಜಿಸುವ ಮೊದಲು ಕಾರ್ಮಿಕರಿಗೆ ಯಾವುದೇ ರೀತಿಯ ಸುರಕ್ಷಾ ಸಾಧನಗಳನ್ನು ನೀಡಿಲ್ಲ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘‘ಕಾರ್ಮಿಕರು ಯಾವುದೇ ರೀತಿಯ ಸುರಕ್ಷಾ ಸಾಧನಗಳನ್ನು ಧರಿಸಿಲ್ಲ. ಅವರಿಗೆ ಯಾವುದೇ ರೀತಿಯ ಸುರಕ್ಷಾ ಸಾಧನಗಳನ್ನು ನೀಡಿಲ್ಲ. ನಾವು ತನಿಖೆ ನಡೆಸುತ್ತಿದ್ದೇವೆ. ಟ್ಯಾಂಕ್ ಪ್ರವೇಶಿಸಿದ ಮೊದಲ ವ್ಯಕ್ತಿಯ ಧ್ವನಿ ಕೇಳಿಸಲಿಲ್ಲ. ಅನಂತರ ಇನ್ನೊಬ್ಬ ವ್ಯಕ್ತಿ ಒಳಗೆ ಹೋದ. ಆತನ ಧ್ವನಿ ಕೂಡ ಕೇಳಿಸಲಿಲ್ಲ. ಅವರನ್ನು ಹುಡುಕಿಕೊಂಡು ಮೂರನೇ ವ್ಯಕ್ತಿ ಹೋದ. ಎಲ್ಲರೂ ಮೃತಪಟ್ಟಿದ್ದಾರೆ’’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ತೂತುಕುಡಿಯಲ್ಲಿ ಬಾರ್ಜ್‌ನಲ್ಲಿ ನಡೆದ ಈ ದುರ್ಘಟನೆ ಪುನ್ನಕಾಯಲ್, ಅಲಂಧಲೈ, ಮನಪ್ಪಾಡು ಹಾಗೂ ಉವರಿಯಂತಹ ಕರಾವಳಿಯ ಸಮುದಾಯಗಳ ಆಕ್ರೋಶಕ್ಕೆ ಕಾರಣವಾಗಿದೆ. ನ್ಯಾಯಕ್ಕಾಗಿ ಅಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ. ದುರ್ಘಟನೆಗೆ ಜವಾಬ್ದಾರರಾದ ಬಾರ್ಜ್ ಮಾಲಕ, ಕ್ಯಾಪ್ಟನ್ ಹಾಗೂ ಇತರ ಅಧಿಕಾರಿಗಳ ವಿರುದ್ಧ ಹತ್ಯೆ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಸ್ಥಳೀಯ ಪ್ರತಿನಿಧಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.