ತಮಿಳುನಾಡು | ರೋಲರ್ ಕೋಸ್ಟರ್‌ನಲ್ಲಿ ಸಿಲುಕಿಕೊಂಡಿದ್ದ 36 ಜನರ ರಕ್ಷಣೆ
Photo | PTI
ಚೆನ್ನೈ: ತಮಿಳುನಾಡಿನ ಥೀಮ್ ಪಾರ್ಕ್‌ವೊಂದರಲ್ಲಿ ರೋಲರ್ ಕೋಸ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ ಮಕ್ಕಳು ಸೇರಿದಂತೆ 36 ಜನರು ಅರ್ಧದಲ್ಲೇ ಸಿಲುಕಿಕೊಂಡಿದ್ದರು. ಅವರನ್ನು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ಒಂದೂವರೆ ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯ ಬಳಿಕ ಎಲ್ಲಾ 36 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗೆ ಎರಡು ಸ್ಕೈ ಲಿಫ್ಟ್‌ಗಳನ್ನು ಬಳಸಲಾಗಿದೆ. 20 ಪುರುಷರು ಮತ್ತು 16 ಮಹಿಳೆಯರನ್ನು ನಾವು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಜಿಲ್ಲಾ ಅಗ್ನಿಶಾಮಕದಳದ ಅಧಿಕಾರಿ ಲೋಗನಾಥನ್ ಹೇಳಿದ್ದಾರೆ.
ʼಏಕಾಏಕಿ ನಿಂತಿದ್ದರಿಂದ ನಮಗೆ ಭಯವಾಯಿತು. ಸುಮಾರು ಎರಡು ಗಂಟೆ ನಮ್ಮನ್ನು ರಕ್ಷಣೆ ಮಾಡಲು, ನಮಗೆ ಧೈರ್ಯ ತುಂಬಲು ಯಾರೂ ಇರಲಿಲ್ಲ. ಪೊಲೀಸ್ ಸಹಾಯಕ್ಕಾಗಿ ನಾವು ಫೋನ್ ಕರೆ ಮತ್ತು ಇನ್ಸ್ಟಾಗ್ರಾಮ್ ಮೊರೆ ಹೋದೆವುʼ ಎಂದು ಘಟನೆ ಬಗ್ಗೆ ವ್ಯಕ್ತಿಯೋರ್ವರು ಅನುಭವವನ್ನು ಹಂಚಿಕೊಂಡಿದ್ದಾರೆ.