ಪೆರಿಯಾರ್ ರ ವೈಚಾರಿಕ ಬೆಳಕು ಜಗತ್ತಿನಾದ್ಯಂತ ಬೆಳಗುತ್ತಿದೆ: ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಶ್ಲಾಘನೆ
ಆಕ್ಸ್ ಫರ್ಡ್ ನಲ್ಲಿ ಪೆರಿಯಾರ್ ಭಾವಚಿತ್ರ ಅನಾವರಣ
ಎಂ.ಕೆ.ಸ್ಟಾಲಿನ್ | PTI
ಚೆನ್ನೈ/ಆಕ್ಸ್ ಫರ್ಡ್: ಸಾಮಾಜಿಕ ಸುಧಾರಕ ಪೆರಿಯಾರ್ (ಇ.ವಿ.ರಾಮಸ್ವಾಮಿ) ಅವರ ವೈಚಾರಿಕ ಬೆಳಕು ಇಂದು ಜಗತ್ತಿನೆಲ್ಲಡೆ ಬೆಳಗುತ್ತಿದ್ದು, ಒಂದು ಶತಮಾನದ ಹಿಂದೆ ಅವರು ಚಾಲನೆ ನೀಡಿದ ಆತ್ಮಗೌರವ ಚಳವಳಿಯು ಸ್ವಾತಂತ್ರ್ಯವನ್ನು ಮರುವ್ಯಾಖ್ಯಾನಗೊಳಿಸಿ, ಸಾಮಾಜಿಕ ಸರಪಣಿ ಕಳಚುವಂತೆ ಹಾಗೂ ಘನತೆ ಎದ್ದು ನಿಲ್ಲುವಂತೆ ಮಾಡಿತು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಶ್ಲಾಘಿಸಿದ್ದಾರೆ.
ತಮಿಳುನಾಡಿಗೆ ವಿದೇಶಿ ಬಂಡವಾಳವನ್ನು ಆಕರ್ಷಿಸುವ ಭಾಗವಾಗಿ ತಾವು ಕೈಗೊಂಡಿರುವ ಬ್ರಿಟನ್ ಪ್ರವಾಸದ ಭಾಗವಾಗಿ ಸೆಪ್ಟೆಂಬರ್ 4ರಂದು ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಸೇಂಟ್ ಆ್ಯಂಟನಿ ಕಾಲೇಜಿನಲ್ಲಿ ಪ್ರಖ್ಯಾತ ಸಮಾಜ ಸುಧಾರಕ ಪೆರಿಯಾರ್ ಅವರ ಭಾವಚಿತ್ರವನ್ನು ಎಂ.ಕೆ.ಸ್ಟಾಲಿನ್ ಅನಾವರಣಗೊಳಿಸಿದರು. ಈ ವೇಳೆ ಅವರು ಪೆರಿಯಾರ್ ರ ಪ್ರಗತಿಪರ ಪರಂಪರೆಯ ಮೇಲೆ ಬೆಳಕು ಚೆಲ್ಲಿದರು.
ಈ ಭಾವಚಿತ್ರವನ್ನು ಭಾರತೀಯ ಕಲಾ ನಿರ್ದೇಶಕ, ಕಲಾವಿದ ಹಾಗೂ ನಿರ್ಮಾಣ ವಿನ್ಯಾಸಕಾರ ತೊಟ್ಟ ತರಣಿ ಬಿಡಿಸಿದ್ದಾರೆ.
ಪೆರಿಯಾರ್ ರ ಆತ್ಮಗೌರವದ ಚಳವಳಿಯಿಂದ ಸಾಮಾಜಿಕ ನ್ಯಾಯದ ಮೇಲೆ ಜಾಗತಿಕ ಪರಿಣಾಮವುಂಟಾಯಿತು ಎಂದು ಹೇಳಿದ ಸ್ಟಾಲಿನ್, ವೈಚಾರಿಕತೆ, ಲಿಂಗ ಸಮಾನತೆ ಹಾಗೂ ಜಾತಿ ವಿರೋಧಿ ಸುಧಾರಣೆಗಳ ಪರವಾದ ಪೆರಿಯಾರ್ ಹೋರಾಟವನ್ನು ಶ್ಲಾಘಿಸಿದರು.
“ಜ್ಞಾನದ ಅನ್ವರ್ಥ ನಾಮವಾದ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಪೆರಿಯಾರ್ ಅವರ ಭಾವಚಿತ್ರವನ್ನು ಅನಾವರಣಗೊಳಿಸುವುದು ನನ್ನ ಪಾಲಿಗೆ ಜೀವಿತಾವಧಿಯ ಗೌರವವಾಗಿದೆ. ಇಂದು ಪೆರಿಯಾರ್ ಅವರ ವೈಚಾರಿಕ ಬೆಳಕು ತಮಿಳುನಾಡಿನ ಗಡಿಗಳನ್ನು ದಾಟಿ ಜಗತ್ತಿನಾದ್ಯಂತ ಬೆಳಗುತ್ತಿದೆ ಎಂಬುದಕ್ಕೆ ಈ ಅನಾವರಣ ಸಾಕ್ಷಿಯಾಗಿದೆ” ಎಂದು ಸ್ಟಾಲಿನ್ ಸಂತಸ ವ್ಯಕ್ತಪಡಿಸಿದರು.