ತಮಿಳುನಾಡು | ವ್ಯಕ್ತಿಯೋರ್ವನ ಮೇಲೆ ಕಾರು ಹರಿಸಿ ಹತ್ಯೆ : ಡಿಎಂಕೆ ನಾಯಕನ ಬಂಧನ
ಸಾಂದರ್ಭಿಕ ಚಿತ್ರ
ಚೆನ್ನೈ: ವ್ಯಕ್ತಿಯೋರ್ವನ ಮೇಲೆ ಕಾರು ಹರಿಸಿ ಹತ್ಯೆಗೈದ ಆರೋಪದ ಮೇಲೆ ಡಿಎಂಕೆ ನಾಯಕ ವಿನಾಯಗಂ ಪಳನಿಸ್ವಾಮಿ ಎಂಬಾತನನ್ನು ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯಿಂದ ಪೊಲೀಸರು ಬಂಧಿಸಿದ್ದಾರೆ.
ಹತ್ಯೆಗೀಡಾದ ವ್ಯಕ್ತಿಯನ್ನು ಪಳನಿಸ್ವಾಮಿ ಎಂದು ಗುರುತಿಸಲಾಗಿದೆ. ಆತ ತನ್ನ ದ್ವಿಚಕ್ರ ವಾಹನದಲ್ಲಿ ತೆರಳುವಾಗ, ಆರೋಪಿ ಡಿಎಂಕೆ ನಾಯಕ ಆತನ ಮೇಲೆ ಕಾರು ಹರಿಸಿ ಹತ್ಯೆಗೈದಿದ್ದಾನೆ ಎಂದು ಹೇಳಲಾಗಿದೆ.
ತನಿಖಾಧಿಕಾರಿಗಳ ಪ್ರಕಾರ, ಆರೋಪಿ ವಿನಾಯಗಂ ಪಳನಿಸ್ವಾಮಿ ಘಟನೆ ನಡೆದ ವೇಳೆ ಮದ್ಯ ಸೇವಿಸಿದ್ದ ಹಾಗೂ ಇದೊಂದು ಹಿಟ್ ಆ್ಯಂಡ್ ರನ್ ಪ್ರಕರಣ ಎಂದು ಭಾವಿಸಲಾಗಿತ್ತು. ಆದರೆ, ಪಳನಿಸ್ವಾಮಿಯೊಂದಿಗೆ ಆರೋಪಿಗೆ ವೈಮನಸ್ಸು ಇದ್ದ ಕಾರಣ ಕೃತ್ಯ ನಡೆದಿರುವ ಬಗ್ಗೆ ಮೃತ ಪಳನಿಸ್ವಾಮಿಯ ಕುಟುಂಬದ ಸದಸ್ಯರು ಶಂಕೆ ವ್ಯಕ್ತಪಡಿಸಿದ್ದರು. ತನಿಖೆಯ ಬಳಿಕ ಇದೊಂದು ಹತ್ಯೆ ಎಂಬುದು ಬೆಳಕಿಗೆ ಬಂದಿತ್ತು.
ಈ ಸಂಬಂಧ ಹತ್ಯೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.