×
Ad

ದೇವಾಲಯದೊಳಗೆ ಬಾಲಕಿಗೆ ಲೈಂಗಿಕ ಕಿರುಕುಳ: 70 ವರ್ಷದ ಅರ್ಚಕನ ಬಂಧನ

Update: 2024-09-27 17:27 IST

PC :   India Today

ತೇನಿ (ತಮಿಳುನಾಡು): ದೇವಾಲಯದೊಳಗೆ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 70 ವರ್ಷದ ಅರ್ಚಕರೊಬ್ಬರನ್ನು ಬಂಧಿಸಿರುವ ಘಟನೆ ತಮಿಳುನಾಡಿನ ತೇನಿ ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ಅರ್ಚಕನನ್ನು ತಿಲಗರ್ ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು indiatoday.in ವರದಿ ಮಾಡಿದೆ.

ಬಾಲಕಿಯೊಬ್ಬಳು ದೇವಾಲಯದಲ್ಲಿ ಅರ್ಚಕ ತನಗೆ ಲೈಂಗಿಕ ಕಿರುಕುಳ ನೀಡಿದ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ದೇವಾಲಯದೆದುರು ದೊಡ್ಡ ಸಂಖ್ಯೆಯಲ್ಲಿ ನೆರೆದ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಆರೋಪಗಳ ಪ್ರಕಾರ, ದೇವಾಲಯದ ಹೊರಗೆ ಕೆಲವು ಬಾಲಕಿಯರು ಆಟವಾಡುತ್ತಿದ್ದರು. ಆಗ ಸಿಹಿ ತಿನಿಸು ನೀಡುವ ಆಮಿಷವೊಡ್ಡಿರುವ ಅರ್ಚಕ, ಆ ಬಾಲಕಿಯರನ್ನು ದೇವಾಲಯದೊಳಗೆ ಕರೆದುಕೊಂಡು ಹೋಗಿದ್ದಾನೆ. ಈ ಪೈಕಿ ಓರ್ವ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ.

ಈ ಘಟನೆಯ ಕುರಿತು ಬಾಲಕಿಯು ತನ್ನ ಪೋಷಕರಿಗೆ ಮಾಹಿತಿ ನೀಡಿದಾಗ, ಬಾಲಕಿಯ ಪೋಷಕರು, ಸಂಬಂಧಿಕರು ಹಾಗೂ ಗ್ರಾಮಸ್ಥರು ದೇವಾಲಯದೆದುರು ನೆರೆದಿದ್ದಾರೆ. ತನ್ನ ಮೇಲೆ ದಾಳಿ ನಡೆಯಬಹುದು ಎಂಬ ಭಯದಿಂದ ದೇವಾಲಯದ ಬಾಗಿಲು ಹಾಕಿಕೊಂಡಿರುವ ಆರೋಪಿ ಅರ್ಚಕನು, ದೇವಾಲಯದೊಳಗೇ ಉಳಿದಿದ್ದಾನೆ.

ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿರುವ ಪೊಲೀಸರು, ತಿಲಗರ್‌ನನ್ನು ವಶಕ್ಕೆ ಪಡೆದಿದ್ದಾರೆ.

ಸಂತ್ರಸ್ತ ಬಾಲಕಿಯ ಪೋಷಕರು ನೀಡಿರುವ ದೂರನ್ನು ಆಧರಿಸಿ ಆರೋಪಿಯ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News