ತಮಿಳುನಾಡು | ಪಿಎಂಕೆ ಪಕ್ಷದಿಂದ ಪುತ್ರ ಅನ್ಬುಮಣಿಯವರನ್ನು ವಜಾಗೊಳಿಸಿದ ರಾಮದಾಸ್
Photo | indianexpress
ಚೆನ್ನೈ: ಪಟ್ಟಾಳಿ ಮಕ್ಕಳ್ ಕಚ್ಚಿ (ಪಿಎಂಕೆ) ಸಂಸ್ಥಾಪಕ ಹಾಗೂ ಹಿರಿಯ ನಾಯಕ ಡಾ. ಎಸ್. ರಾಮದಾಸ್, ತಮ್ಮ ಪುತ್ರ ಹಾಗೂ ಪಕ್ಷದ ಕಾರ್ಯಕಾರಿ ಅಧ್ಯಕ್ಷರಾಗಿದ್ದ ಅನ್ಬುಮಣಿ ರಾಮದಾಸ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ಎಲ್ಲಾ ಹುದ್ದೆಗಳಿಂದ ವಜಾಗೊಳಿಸಿದ್ದಾರೆ.
ಗುರುವಾರ ಚೆನ್ನೈನ ದಕ್ಷಿಣದಲ್ಲಿರುವ ಥೈಲಾಪುರಂನಲ್ಲಿ ನಡೆದ ಪಿಎಂಕೆಯ ಉನ್ನತ ಮಟ್ಟದ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಮದಾಸ್, “ಅನ್ಬುಮಣಿ ಎಂಬ ಕಳೆಯನ್ನು ಪಿಎಂಕೆಯಿಂದ ತೆಗೆಯಲಾಗಿದೆ. ಕೇವಲ ಹುದ್ದೆಯಿಂದ ಅಲ್ಲ, ಸಂಪೂರ್ಣವಾಗಿ ಪಕ್ಷದಿಂದಲೇ ಹೊರಹಾಕಲಾಗಿದೆ” ಎಂದು ಘೋಷಿಸಿದ್ದಾರೆ.
ಕಳೆದ ಹಲವು ತಿಂಗಳುಗಳಿಂದ ಅನ್ಬುಮಣಿಯವರ ನಡೆಗೆ ಸಂಬಂಧಿಸಿದಂತೆ ಪಕ್ಷದೊಳಗೆ ತೀವ್ರ ಅಸಮಾಧಾನ ತಲೆದೋರಿತ್ತು. ಬಿಜೆಪಿ ನಾಯಕರಿಂದ ಹಿಡಿದು ಆರೆಸ್ಸೆಸ್ ಕಾರ್ಯಕರ್ತರು ಹಾಗೂ ವೆಲ್ಲೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕುಲಪತಿವರೆಗೂ ಸಂಧಾನ ನಡೆದರೂ, ಕೌಟುಂಬಿಕ ಕಲಹಕ್ಕೆ ಪರಿಹಾರ ಕಂಡುಹಿಡಿಯಲಾಗಿರಲಿಲ್ಲ.
ಅನ್ಬುಮಣಿಯವರಿಗೆ ಈ ಮೊದಲು ಶೋ-ಕಾಸ್ ನೋಟಿಸ್ ನೀಡಲಾಗಿತ್ತು. ಆದರೆ ಅವರು ಲಿಖಿತವಾಗಿ ಅಥವಾ ವೈಯಕ್ತಿಕವಾಗಿ ಯಾವುದೇ ಉತ್ತರ ನೀಡದಿರುವುದರಿಂದ, ಆರೋಪಗಳು ಸತ್ಯವೆಂದು ಪರಿಗಣಿಸಲಾಗಿದೆ. ಪಕ್ಷದ ಶಿಸ್ತಿನ ಮಾನದಂಡಗಳನ್ನು ನಾವು ಯಾವತ್ತೂ ಅಕ್ಷರಶಃ ಪಾಲಿಸುತ್ತಿದ್ದೇವೆ. ಅದೇ ಕ್ರಮವನ್ನು ಇಲ್ಲಿ ಅನುಸರಿಸಲಾಗಿದೆ ಎಂದು ರಾಮದಾಸ್ ಸ್ಪಷ್ಟಪಡಿಸಿದ್ದಾರೆ.