ತಮಿಳುನಾಡು ರಾಜ್ಯ ಶಿಕ್ಷಣ ನೀತಿ ಅನಾವರಣ; NEPಗೆ ಪರ್ಯಾಯ, ದ್ವಿಭಾಷಾ ವ್ಯವಸ್ಥೆ ಜಾರಿ
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (Photo: PTI)
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಶುಕ್ರವಾರ ಕೊಟ್ಟೂರುಪುರಂನ ಅಣ್ಣಾ ಶತಮಾನೋತ್ಸವ ಗ್ರಂಥಾಲಯ ಸಭಾಂಗಣದಲ್ಲಿ ರಾಜ್ಯ ಶಿಕ್ಷಣ ನೀತಿಯನ್ನು ಅಧಿಕೃತವಾಗಿ ಅನಾವರಣಗೊಳಿಸಿದರು. ಇದು ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ (NEP)ಗೆ ಸ್ಪಷ್ಟ ಪರ್ಯಾಯವಾಗಿದ್ದು, ರಾಜ್ಯವು ತನ್ನ ದ್ವಿಭಾಷಾ ಕ್ರಮವನ್ನು ಮುಂದುವರೆಸುವ ಬದ್ಧತೆಯನ್ನು ಪುನರುಚ್ಚರಿಸಿದೆ.
2022ರಲ್ಲಿ ನಿವೃತ್ತ ನ್ಯಾಯಮೂರ್ತಿ ಮುರುಗೇಶನ್ ಅವರ ಅಧ್ಯಕ್ಷತೆಯಲ್ಲಿ ರಚಿಸಲ್ಪಟ್ಟ 14 ಸದಸ್ಯರ ತಜ್ಞರ ಸಮಿತಿಯನ್ನು SEP ಮಸೂದೆ ಸಿದ್ಧಪಡಿಸಲು ನೇಮಿಸಲಾಗಿತ್ತು. ಸಮಿತಿಯು ಕಳೆದ ವರ್ಷದ ಜುಲೈನಲ್ಲಿ ತನ್ನ ಶಿಫಾರಸುಗಳನ್ನು ಮುಖ್ಯಮಂತ್ರಿಗಳಿಗೆಸಲ್ಲಿಸಿತು. ಈಗ, ಆ ವರದಿಯನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಅನುಷ್ಠಾನಕ್ಕೆ ತಂದಿದೆ.
SEP ಪ್ರಕಾರ, ರಾಜ್ಯವು ದ್ವಿಭಾಷಾ ಶಿಕ್ಷಣ ನೀತಿಯನ್ನು ಮುಂದುವರಿಸಿಕೊಂಡು, NEPಯ ತ್ರಿಭಾಷಾ ಸೂತ್ರವನ್ನು ತಿರಸ್ಕರಿಸಿದೆ. ಜೊತೆಗೆ, ಸಾಮಾನ್ಯ ಪ್ರವೇಶ ಪರೀಕ್ಷೆಗಳ ಬದಲಿಗೆ 11ನೇ ಮತ್ತು 12ನೇ ತರಗತಿಗಳ ಏಕೀಕೃತ ಅಂಕಗಳನ್ನು ಆಧಾರವಾಗಿ ಪಡೆದು ಪದವಿಯ ಕಲೆ ಹಾಗೂ ವಿಜ್ಞಾನ ವಿಭಾಗಗಳಿಗೆ ಪ್ರವೇಶ ನೀಡುವ ವ್ಯವಸ್ಥೆಯನ್ನು ಶಿಫಾರಸು ಮಾಡಲಾಗಿದೆ.
NEPಯ ಪ್ರಕಾರ 3, 5 ಮತ್ತು 8ನೇ ತರಗತಿಗಳಲ್ಲಿ ಪಬ್ಲಿಕ್ ಪರೀಕ್ಷೆಗಳನ್ನು ನಡೆಸುವ ಪ್ರಸ್ತಾವನೆಯನ್ನು SEP ತಿರಸ್ಕರಿಸಿದೆ. ಸಮಿತಿ ಇದನ್ನು, ಸಾಮಾಜಿಕ ನ್ಯಾಯ ವಿರೋಧಿ” ಎಂದು ಪರಿಗಣಿಸಿದ್ದು, ಇಂತಹ ಕ್ರಮವು ಶಾಲೆ ತೊರೆಯುವ ಮಕ್ಕಳ ಪ್ರಮಾಣ ಹೆಚ್ಚಿಸಿ, ಶಿಕ್ಷಣದ ವಾಣಿಜ್ಯೀಕರಣಕ್ಕೆ ದಾರಿ ಮಾಡಿಕೊಡಬಹುದು ಎಂದು ಎಚ್ಚರಿಸಿದೆ.
ಹೊಸ ನೀತಿ ವಿಜ್ಞಾನ, ಕೃತಕ ಬುದ್ಧಿಮತ್ತೆ (AI) ಹಾಗೂ ಇಂಗ್ಲಿಷ್ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದರ ಜೊತೆಗೆ, ಸರ್ಕಾರಿ ಸ್ವಾಮ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಗಣನೀಯ ಹೂಡಿಕೆಗಳಿಗೆ ಶಿಫಾರಸು ಮಾಡಿದೆ. ಜೊತೆಗೆ, ಶಿಕ್ಷಣವನ್ನು ಸಮಕಾಲೀನ ಪಟ್ಟಿಯಿಂದ ರಾಜ್ಯ ಪಟ್ಟಿಗೆ ಮರಳಿ ತರುವಂತೆ ಆಗ್ರಹಿಸಿದೆ.
ರಾಜ್ಯ ಮತ್ತು ಕೇಂದ್ರದ ನಡುವೆ ಹಣಕಾಸು ಸಂಬಂಧಿಸಿದಂತೆ ವಾಗ್ವಾದಗಳು ಹೆಚ್ಚಿರುವ ಸಂದರ್ಭದಲ್ಲಿಯೇ ತಮಿಳುನಾಡು ಸರ್ಕಾರ SEP ಅನಾವರಣಗೊಳಿಸಿದೆ. NEP ಜಾರಿಗೆ ನಿರಾಕರಿಸಿದ್ದಕ್ಕೆ ಕೇಂದ್ರ ಸರ್ಕಾರ ಸಮಗ್ರ ಶಿಕ್ಷಣ ಯೋಜನೆಯಡಿ ತಮಿಳುನಾಡಿಗೆ ನೀಡಬೇಕಿದ್ದ 2,152 ಕೋಟಿ ರೂ.ಗಳನ್ನು ತಡೆಹಿಡಿದಿದೆ ಎಂದು ರಾಜ್ಯ ಸರ್ಕಾರ ಆರೋಪಿಸಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು, ರಾಜ್ಯವು NEET ಅಳವಡಿಸಿಕೊಂಡ ನಂತರ ಮಾತ್ರ ಹಣ ಬಿಡುಗಡೆ ಮಾಡುವುದಾಗಿ ಹೇಳಿದ್ದರು.
ರಾಜ್ಯ ಶಿಕ್ಷಣ ನೀತಿಯ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯದ ಸಚಿವ ಉದಯನಿಧಿ ಸ್ಟಾಲಿನ್, “ಕೇಂದ್ರವು 1,000 ಕೋಟಿ ರೂಪಾಯಿ ನೀಡಿದರೂ, ತಮಿಳುನಾಡು ಸರ್ಕಾರವು NEP ಜಾರಿಗೆ ತರದು. ಯಾವುದೇ ರೀತಿಯ ಹೇರಿಕೆಯನ್ನು ನಾವು ಒಪ್ಪುವುದಿಲ್ಲ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.